ಮಡಿಕೇರಿ: ಪ್ರಾಕೃತಿಕ ವಿಕೋಪ ಸಂದರ್ಭ ನಾಗರಿಕರ ರಕ್ಷಣೆ; ಗಮನ ಸೆಳೆದ ಪ್ರಾತ್ಯಕ್ಷಿಕೆ

ಮಡಿಕೇರಿ, ಮೇ 29 : ಜೋರು ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿ ಅಲ್ಲಿನ ನಾಗರಿಕರು ದಿಕ್ಕು ತೋಚದಂತಾಗಿ ಪರಿತಪಿಸುತ್ತಿದ್ದ ಕುಟುಂಬದವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಬ್ಬೆಟಗೇರಿ ಮತ್ತು ಹಟ್ಟಿಹೊಳೆಯಲ್ಲಿ ಬುಧವಾರ ಪ್ರಾತ್ಯಕ್ಷಿಕೆ/ ಅಣಕು ಪ್ರದರ್ಶನ ನಡೆಯಿತು.
ಅಣಕು ಪ್ರದರ್ಶನದಲ್ಲಿ ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್‍ಡಿಆರ್‍ಎಫ್, ಅಗ್ನಿಶಾಮಕ ಇಲಾಖೆ, ಗೃಹ ರಕ್ಷಕದಳ, ಪೊಲೀಸ್ ಇಲಾಖೆ, ಹೀಗೆ ನಾನಾ ರಕ್ಷಣಾ ತಂಡಗಳು ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಹೇಗೆ ರಕ್ಷಣಾ ಕಾರ್ಯ ನಿಭಾಯಿಸಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿ ಗಮನ ಸೆಳೆದರು.
ಬೆಟ್ಟದಿಂದ ಕೆಳಗೆ ಹಗ್ಗ ಹಾಗೂ ಏಣಿ ಬಳಸಿ ನಾಗರಿಕರನ್ನು ರಕ್ಷಣೆ ಮಾಡುವುದು, ಬೆಟ್ಟದಿಂದ ಸಮತಟ್ಟು ಪ್ರದೇಶಕ್ಕೆ ಹಗ್ಗದ ಮೂಲಕ ಕಳುಹಿಸುವುದು, ರಕ್ಷಣೆ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವುದು. ಚಿಕಿತ್ಸೆ ನೀಡಿದ ನಂತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡುವುದು. ಹೀಗೆ ನಾನಾ ರೀತಿಯ ರಕ್ಷಣಾ ಕಾರ್ಯಗಳ ಪ್ರಾತ್ಯಕ್ಷಿಕೆ ಜರುಗಿತು.
ಅಗ್ನಿಶಾಮಕ ಇಲಾಖೆ, ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್‍ಡಿಆರ್‍ಎಫ್, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಹೀಗೆ ಹಲವು ರಕ್ಷಣಾ ತಂಡಗಳಿಂದ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆಯನ್ನು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ. ಅದ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಯಾಲದಾಳು ಪದ್ಮಾವತಿ ಅವರು ವೀಕ್ಷಣೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಭೂಕುಸಿತ ಹಾಗೂ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿರುವ ಕ್ರಮಗಳ ಬಗ್ಗೆ ವಿವಿಧ ರಕ್ಷಣಾ ತಂಡಗಳಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಜನರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ, ರಾಜ್ಯ ನಾಗರಿಕ ರಕ್ಷಣಾ ಪಡೆ, ಎನ್‍ಡಿಆರ್‍ಎಫ್, ಗೃಹ ರಕ್ಷಕ ದಳ, ಅಗ್ನಿ ಶಾಮಕ ಇಲಾಖೆ ಹೀಗೆ ಹಲವು ರಕ್ಷಣಾ ತಂಡಗಳ ಜೊತೆ ಸಮನ್ವಯತೆ ಸಾಧಿಸಿ ಅಗತ್ಯ ಸಹಕಾರ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದರು.
ಅಗ್ನಿ ಶಾಮಕ ಇಲಾಖೆಯ ಮಂಗಳೂರು ವಿಭಾಗದ ಮುಖ್ಯಸ್ಥರಾದ ಶಿವಶಂಕರ, ಮೈಸೂರು ವಿಭಾಗದ ಕೌಸರ್, ಗುರುಲಿಂಗಯ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚೇತನ್, ಮೈಸೂರು, ಉಡುಪಿ ಜಿಲ್ಲೆಗಳ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಾಜ್ಯ ನಾಗರಿಕ ರಕ್ಷಣಾ ಪಡೆಯ ಕಮಾಂಡರ್ ಚೇತನ್ ಮತ್ತು ತಂಡದವರು, ಎನ್‍ಡಿಆರ್‍ಎಫ್‍ನ ರಮೇಶ್, ದೊಡ್ಡಬಸಪ್ಪ ಇತರರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಅಧಿಕಾರಿ ಡಾ.ವಿಶ್ವನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ನೋಡಲ್ ಅಧಿಕಾರಿಗಳಾದ ಷಂಶುದ್ದೀನ್, ಇಬ್ರಾಹಿಂ, ಶ್ರೀಕಂಠಯ್ಯ, ರೇವಣ್ಣವರ್, ಶಿವಕುಮಾರ್, ರಾಜು, ಶ್ರೀನಿವಾಸ್, ತಹಶೀಲ್ದಾರರಾದ ನಟೇಶ್, ಗೋವಿಂದ ರಾಜು ಇತರರು ಹಾಜರಿದ್ದರು.
ಹೆಬ್ಬೆಟಗೇರಿ ಸುತ್ತಮುತ್ತಲಿನ ನಾಗರಿಕರು ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದರು. ಅಣಕು ಪ್ರದರ್ಶನ ನಂತರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರಾಜ್ಯ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ಇಲಾಖೆ, ಎನ್‍ಡಿಆರ್‍ಎಫ್ ರಕ್ಷಣಾ ತಂಡಗಳಿಂದ ಪ್ರದರ್ಶಿಸಿದ ಉಪಕರಣಗಳ ಮಾಹಿತಿ ಪಡೆದರು. ಅಣಕು ಪ್ರದರ್ಶನ/ಪ್ರಾತ್ಯಕ್ಷಿಕೆಯನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಯಿತು.
ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಹಟ್ಟಿಹೊಳೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಶಾಸಕರಾದ ಎಂ.ಪಿ.ರಂಜನ್, ಜಿ.ಪಂ. ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಅತಿವೃಷ್ಟಿ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಮಾನವ ರಹಿತ ಯಂತ್ರ ಚಾಲಿತ ದೋಣಿ, ತೇಲುವ ಸೇತುವೆಯನ್ನು ಬಳಸಿ, ಅತ್ಯಾಧುನಿಕ ರಬ್ಬರ್ ದೋಣಿಗಳ ಮೂಲಕ ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿತಟದಿಂದ ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವ, ಅತಿವೃಷ್ಟಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವುದು, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಜೀವ ರಕ್ಷಣೆಯನ್ನು ಮಾಡಿಕೊಳ್ಳುವ ಪ್ರಾತ್ಯಕ್ಷಿಕೆ ಜರುಗಿತು. ಹಟ್ಟಿಹೊಳೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರು.







