ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆ; ಬಹುತೇಕ ಶಾಂತಿಯುತ ಮತದಾನ
ಶಿವಮೊಗ್ಗ, ಮೇ 29: ಜಿಲ್ಲೆಯ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಹಾಗೂ ಹೊಸನಗರ ಪಟ್ಟಣ ಪಂಚಾಯತ್ ಗಳಿಗೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿತ್ತು. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಮತದಾನ ನಡೆಯಿತು. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಾಲ್ಕು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಅಂತ್ಯಗೊಂಡಿತು. ಈ ಬಾರಿ ಇವಿಎಂ ಯಂತ್ರಗಳನ್ನು ಮತದಾನಕ್ಕೆ ಬಳಸಲಾಗಿತ್ತು. ಮೇ 31 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ಜಿದ್ದಾಜಿದ್ದಿನ ಅಖಾಡ: ಪ್ರಸ್ತುತ ಚುನಾವಣೆ ನಡೆದ ನಾಲ್ಕು ಸ್ಥಳೀಯ ಸಂಸ್ಥೆಗಳ ಬಹುತೇಕ ಎಲ್ಲ ವಾರ್ಡ್‍ಗಳಲ್ಲಿ ಜಿದ್ದಾಜಿದ್ದಿನ ಅಖಾಡ ಕಂಡುಬಂದಿದೆ. ಅಧಿಕಾರದ ಗದ್ದುಗೆಯೇರಲು ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ, ಕೆಲವೆಡೆ ಮೈತ್ರಿಗಳ ನಡುವೆಯೇ ಹೋರಾಟ ಏರ್ಪಟ್ಟಿದೆ. ಉಳಿದಂತೆ ಬಿಜೆಪಿಗೆ ಹಲವೆಡೆ ಬಂಡಾಯ ಅಭ್ಯರ್ಥಿಗಳು ಎಡರುತೊಡರಾಗಿ ಪರಿಣಮಿಸಿದ್ದಾರೆ.
ಮತದಾನ ನಡೆಯುವುದಕ್ಕೂ ಹಿಂದಿನ ರಾತ್ರಿ ಕೆಲವೆಡೆ ಮತದಾರರಿಗೆ ನಾನಾ ರೀತಿಯ ಆಮಿಷವೊಡ್ಡಿರುವ, ಹಣ-ಮದ್ಯದ ಹೊಳೆಯೇ ಹರಿದಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ. ಕೆಲ ಅಭ್ಯರ್ಥಿಗಳು ಮತದಾರರಿಗೆ 500 ರಿಂದ 2000 ರೂ.ಗಳವರೆಗೆ ವಿತರಿಸಿದ್ದಾರೆನ್ನಲಾಗಿದೆ. ಇನ್ನೂ ಕೆಲವರು ಹಲವು ರೀತಿಯ ಉಡುಗೊರೆಗಳನ್ನು ಕೊಟ್ಟು ಮತದಾರರ ಮನ ಗೆಲ್ಲುವ ವಾಮಮಾರ್ಗ ಅನುಸರಿಸಿದ್ದಾರೆಂಬ ಮಾತುಗಳು ಕೇಳಿಬಂದಿವೆ.
ಇತ್ತೀಚೆಗೆ ಪ್ರಕಟಗೊಂಡ ಲೋಕಸಭಾ ಚುನಾವಣಾ ಫಲಿತಾಂಶವು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆಯೂ ಪ್ರಭಾವ ಬೀರಲಿದೆ. ಎಲ್ಲ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿಯೂ ಅಧಿಕಾರದ ಗುದ್ದುಗೆಯೇರಲಿದ್ದೇವೆ ಎಂದು ಬಿಜೆಪಿ ಪಕ್ಷ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದೆ. ಇನ್ನೊಂದೆಡೆ ಲೋಕಸಭೆ ಚುನಾವಣಾ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಮುಖಭಂಗಕ್ಕೀಡಾಗುವುದು ಖಚಿತ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಅಭಿಪ್ರಾಯ ಪಡುತ್ತಾರೆ.
ವಿವರ: ಬಿಜೆಪಿಯು ನಾಲ್ಕು ಸ್ಥಳೀಯ ಸಂಸ್ಥೆಗಳ ಎಲ್ಲ 82 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 61 ಹಾಗೂ ಜೆಡಿಎಸ್ ಪಕ್ಷ 21 ರಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿವೆ. ಉಳಿದಂತೆ ಒಟ್ಟಾರೆ 122 ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
82 ವಾರ್ಡ್‍ಗಳಿಗೆ ಎಲೆಕ್ಷನ್
ಸಾಗರ ನಗರಸಭೆಯ 31 ವಾರ್ಡ್‍ಗಳಲ್ಲಿ 133 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಉಳಿದಂತೆ ಶಿಕಾರಿಪುರ ಪುರಸಭೆಯ 23 ವಾರ್ಡ್‍ಗಳಿಂದ 68 ಅಭ್ಯರ್ಥಿಗಳು, ಶಿರಾಳಕೊಪ್ಪ ಪಟ್ಟಣ ಪಂಚಾಯತ್ ನ 17 ವಾರ್ಡ್‍ಗಳಿಂದ 64, ಹೊಸನಗರ ಪ.ಪಂ. 11 ವಾರ್ಡ್‍ಗಳಿಂದ 25 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಒಟ್ಟಾರೆ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಮತದಾನಕ್ಕೆ 113 ಮತಗಟ್ಟೆಗಳನ್ನು ಸಿದ್ದಪಡಿಸಲಾಗಿತ್ತು. ಸಾಗರದಲ್ಲಿ 57, ಶಿಕಾರಿಪುರದಲ್ಲಿ 28, ಶಿರಾಳಕೊಪ್ಪದಲ್ಲಿ 17, ಸೊರಬದಲ್ಲಿ 12, ಹೊಸನಗರದಲ್ಲಿ 11 ಮತಗಟ್ಟೆಗಳಿದ್ದವು.







