ಇಂಟಕ್ ಪದಾಧಿಕಾರಿಯ ಅಮಾನತು ಅಧಿಕಾರ ಡಿಸಿಸಿಗೆ ಇಲ್ಲ: ಪುನೀತ್ ಶೆಟ್ಟಿ

ಮಂಗಳೂರು, ಮೇ 30: ಇಂಟಕ್‌ನ ಪದಾಧಿಕಾರಿಯಾಗಿರುವ ನನ್ನನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಮಾನತು ಮಾಡುವ ಅಧಿಕಾರವನ್ನು ಹೊಂದಿಲ್ಲ. ಈ ಬಗ್ಗೆ ನನಗೆ ಡಿಸಿಸಿಯಿಂದಾಗಲಿ ಕೆಪಿಸಿಸಿಯಿಂದಾಗಲಿ ಯಾವುದೇ ನೋಟೀಸು ಬಂದಿಲ್ಲ ಎಂದು ಇಂಟೆಕ್ ಯುವ ಘಟಕದ ಅಧ್ಯಕ್ಷ ಪುನೀತ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಇಂಟೆಕ್‌ನ ನಿಷ್ಠಾವಂತ ಕಾರ್ಯಕರ್ತ. ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕ ವರ್ಗಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ಡಿಕೆಶಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸದ ಮಿಥುನ್ ರೈ ಒತ್ತಾಯಕ್ಕೆ ಮಣಿದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಕಾಂಗ್ರೆಸ್ ಸದಸ್ಯತ್ವದಿಂದ ಅಮಾನತು ಹೊರಡಿಸಿರುವುದು ಹಾಸ್ಯಾಸ್ಪದ ಎಂದರು.
ಜಿಲ್ಲೆಯಲ್ಲಿ ಮಿಥುನ್ ರೈ ಬೆಂಬಲಿತ ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿದ ಪುನೀತ್ ಶೆಟ್ಟಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಿಥುನ್ ರೈ ಮತ್ತು ಅವರ ಬೆಂಬಲಿಗರು ಹರೀಶ್ ಕುಮಾರ್ ಅಣತಿಯಂತೆ ಅವರ ಮಗ ಅಭಿನಂದನ್ ಮೂಲಕ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಪಲ ನೀಡಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹರೀಶ್ ಕುಮಾರ್ ಪಕ್ಷದ ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಸೋತಿದೆ. ಇದಕ್ಕೆ ಅವರ ದುರ್ಬಲತೆಯೇ ಕಾರಣ. ಅವರನ್ನು ಬದಲಾವಣೆ ಮಾಡಿ ಪಕ್ಷಕ್ಕೆ ಮಾಜಿ ಸಚಿವ ರಮಾನಾಥ ರೈಯಂತಹ ಉತ್ತಮ ನಾಯಕರನ್ನು ನೇಮಕ ಮಾಡಬೇಕು. ಈ ಬಗ್ಗೆ ಈಗಾಗಲೇ ಕೆಪಿಸಿಸಿಗೆ ತಾನು ಪತ್ರವನ್ನೂ ಬರೆದಿರುವದುಆಗಿ ಪುನೀತ್ ಶೆಟ್ಟಿ ಹೇಳಿದರು.
ರೌಡಿ ಸ್ವಭಾವದ ಮಿಥುನ್ ರೈಗೆ ಪಕ್ಷ ಈ ಬಾರಿ ಲೋಕಸಭಾ ಟಿಕೆಟ್ ನೀಡಿ ಭಾರೀ ಅಂತರದಿಂದ ಸೋಲು ಕಾಣಬೇಕಾಯಿತು. ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಬೇಕು. ಪಕ್ಷಕ್ಕೆ ಸಾಕಷ್ಟು ಯುವಕರು ಸೇರ್ಪಡೆಗೆ ಉತ್ಸಾಹ ಹೊಂದಿದ್ದರೂ ಮಿಥುನ್ ರೈಯವರ ರೌಡಿ ಸ್ವಭಾವದಿಂದಾಗಿ ಬೆದರುತ್ತಾರೆ. ಇತ್ತೀಚೆಗೆ ಮಿಥುನ್ ರೈಯವರು ತಾನು 365 ದಿನವೂ ಪಕ್ಷದ ಕಚೇರಿಯಲ್ಲಿ ಇರುವುದಾಗಿ ಹೇಳಿದ್ದರು. ಆದರೆ ಎರಡು ದಿನಗಳಾಯಿತು. ಅವರು ಕಚೇರಿಯಲ್ಲಿ ಕಂಡುಬಂದಿಲ್ಲ ಎಂದು ಪುನೀತ್ ಶೆಟ್ಟಿ, ಮಿಥುನ್ ರೈ ವಿರುದ್ಧ ಏಕವಚನದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿರು.
ಗೋಷ್ಠಿಯಲ್ಲಿ ಮುದಸ್ಸಿರ್, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.







