ಮಿಥುನ್ ರೈ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ರಮಾನಾಥ ರೈ ಒತ್ತಾಯ

ಬಂಟ್ವಾಳ, ಮೇ 30: ಬಡಕಬೈಲಿನಲ್ಲಿ ಬಿಜೆಪಿ ವಿಜಯೋತ್ಸವ ಸಂದರ್ಭ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಿಯಲ್ಲೊಬ್ಬ ಕೇರಳದಲ್ಲಿ ಕೊಲೆ ಪ್ರಕರಣದ ಪ್ರಧಾನ ಆರೋಪಿಯಾಗಿದ್ದು, ಪೊಲೀಸರು ಯಾವುದೇ ಒತ್ತಡಗಳಿಗೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ನಿಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು. ಇದುವರೆಗೆ ಈ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮವನ್ನು ಅಭಿನಂದಿಸುತ್ತೇನೆ ಎಂದರು.
ಬಡಕಬೈಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಮನೆಯಂಗಳಕ್ಕೆ ಬಂದು ವಿಜಯೋತ್ಸವ ಆಚರಿಸಿ ಅವರನ್ನು ನಿಂದಿಸಲಾಗಿದೆ. ಈ ವಿಚಾರವಾಗಿಯೂ ಪೊಲೀಸರು ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕಿದ್ದು, ಎಎಸ್ಪಿ ಅವರಿಗೆ ಪ್ರಕರಣದ ಕುರಿತು ವಿವರಿಸಿದ್ದೇನೆ ಎಂದರು.
ಹಿಂದೆ ನಡೆದ ಗಲಭೆಗಳ ಪ್ರಮುಖ ಆರೋಪಿಗಳು ಯಾರು?, ಜಲೀಲ್ ಕರೋಪಾಡಿ, ಶರತ್ ಮಡಿವಾಳ, ಅಶ್ರಫ್, ಹರೀಶ್ ಪೂಜಾರಿ ಹತ್ಯೆಗಳ ಆರೋಪಿಗಳು ಯಾರು?, ಕಲ್ಲು ತೂರಾಟ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತನಿಲ್ಲ. ಬದಲಾಗಿ ಮತೀಯವಾದಿ ಸಂಘಟನೆಗಳು ಹಾಗು ಇವನ್ನು ಪೋಷಿಸುವ ರಾಷ್ಟ್ರೀಯ ಪಕ್ಷಗಳು ಕಾರಣ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ತನ್ನ ಬಗ್ಗೆ ಅಪಪ್ರಚಾರಗಳು ನಡದಿವೆ. ಕಲ್ಲಡ್ಕ ಶಾಲೆಗೆ ಅಕ್ಕಿ ಬರುವುದನ್ನು ನಾನು ನಿಲ್ಲಿಸಿಲ್ಲ, ಅದಕ್ಕೆ ಬರುವ ಹಣವನ್ನು ನಿಲ್ಲಿಸಿದ್ದೇನೆ. ದೇವರ ದುಡ್ಡು ದುರುಪಯೋಗ ಆಗಬಾರದು ಎಂಬುದೇ ನನ್ನ ಯೋಚನೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಶಾಂತಿ ನೆಲೆಸಿದೆ ಎಂದು ಬಿಜೆಪಿಯವರು ಸಂದೇಶಗಳನ್ನು ಹರಡುತ್ತಿದ್ದಾರೆ. ಶಾಂತಿ ಕದಡಿದವರು ನಾವಲ್ಲ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
.jpg)







