ಉಡುಪಿ- ಕುಂದಾಪುರದಲ್ಲಿ ಸಿಐಟಿಯು ಸಂಸ್ಥಾಪನ ದಿನಾಚರಣೆ

ಕುಂದಾಪುರ, ಮೇ 30: ಕುಂದಾಪುರ ತಾಲೂಕು ಸಿಐಟಿಯು ವತಿಯಿಂದ ಸಿಐಟಿಯು ಸಂಸ್ಥಾಪನ ದಿನವನ್ನು ಗುರುವಾರ ಕುಂದಾಪುರ ಹಂಚುಕಾರ್ಮಿಕ ಭವನದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಮಾತನಾಡಿ, ದೇಶದ ದುಡಿಯುವ ಜನರ ಕಾರ್ಮಿಕ ಸಂಘಟನೆ ಸಿಐಟಿಯು 1970 ಮೇ 30ರಂದು ಕೊಲ್ಕತ್ತದಲ್ಲಿ ನಡೆದ ಕಾರ್ಮಿಕರ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಣೆಯಾಯಿತು. ದೇಶದ ಕಾರ್ಮಿಕ ಚಳವಳಿಯಲ್ಲಿ ಸಿಐಟಿಯು ಸಮರಧೀರ ಹೋರಾಟ ನಡೆಸಿದೆ. ಸಿಐಟಿಯು ಸಂಘಟನೆ ಇಂದು ದೇಶದಾದ್ಯಂತ ಸುವರ್ಣ ಮಹೋತ್ಸವ ಆಚರಿಸು ತ್ತಿದೆ ಎಂದು ಹೇಳಿದರು.
ಸಿಐಟಿಯು ಸಂಘಟನೆ ಸ್ಥಾಪನೆಗೂ ಮೊದಲು ದೇಶದ ಕಾರ್ಮಿಕ ಚಳವಳಿ ಕೆಂಬಾವುಟದಡಿಯಲ್ಲಿ ನೂರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿತ್ತು. ಇಂತಹ ಹೋರಾಟಗಳಿಂದ ಕಾರ್ಮಿಕರ ನ್ಯಾಯಬದ್ಧ ಸವಲತ್ತು ಗಳನ್ನು ಪಡೆಯಲು ಮತ್ತು ಸಂರಕ್ಷಿಸಿಕೊಳ್ಳಲು ಸಾಧ್ಯವಾಗಿದೆ. ದೇಶದ ಬಲಪಂಥೀಯ ಆಡಳಿತವು ಕಾರ್ಮಿಕ ಕಾನೂನು ಸುಧಾರಣೆಯ ಹೆಸರಿನಲ್ಲಿ ಕಾನೂನು ತಿದ್ದುಪಡಿ ಮಾಡಿ ಸವಲತ್ತುಗಳನ್ನು ಕಡಿತ ಗೊಳಿಸುತ್ತಿರುವುದರ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಚಳವಳಿ ಬಲಿಷ್ಠಗೊಳಿಸಲು ನಿರ್ಧರಿಸಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಹಿರಿಯ ಮುಖಂಡ ಮಹಾಬಲ ವಡೇರಹೋಬಳಿ, ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಸುರೇಶ್ ಕಲ್ಲಾಗರ ಮತ್ತಿತ್ತರರು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಆಚರಣೆ: ಉಡುಪಿ ಸಿಐಟಿಯು ಕಚೇರಿಯಲ್ಲಿ ಸಿಐ ಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಖಜಾಂಚಿ ಉಮೇಶ್ ಕುಂದರ್, ನಳಿನಿ, ಶೇಖರ್ ಬಂಗೇರ, ವಾಮನ ಪೂಜಾರಿ, ಕೆ.ಲಕ್ಷಣ್, ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.







