ಶಿಕ್ಷಕನ ಕೊಲೆಯತ್ನ ಪ್ರಕರಣ ಭೇದಿಸಿದ ಪೊಲೀಸರು: 6 ಮಂದಿ ಸುಪಾರಿ ಹಂತಕರ ಬಂಧನ

ಬೆಂಗಳೂರು, ಮೇ 30: ಶಾಲಾ ಶಿಕ್ಷಕನನ್ನು ದ್ವೇಷದ ಮೇಲೆ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು ಭೇದಿಸಿರುವ ದೊಡ್ಡಬಳ್ಳಾಪುರ ಪೊಲೀಸರು 6 ಮಂದಿ ಸುಪಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ಬಿಗೆರೆಯ ಶ್ರೀನಿವಾಸಮೂರ್ತಿ (37), ನಾಗೇಶ್ ಕುಮಾರ್(24), ನೆಲಮಂಗಲದ ಭಕ್ತನ ಪಾಳ್ಯದ ವೆಂಕಟೇಶ್ (29), ಹೆಗ್ಗಡದೇವನಪುರದ ಯೋಗೇಶ್(27), ಮಾಗಡಿಯ ಆದರ್ಶ(20) ಹಾಗೂ ಸುಮನಹಳ್ಳಿಯ ವೀರಭದ್ರ (29) ಬಂಧಿತ ಸುಫಾರಿ ಹಂತರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ: ಹೆಸರುಘಟ್ಟದ ಎಚ್‌ಎಸ್‌ಎಲ್‌ಎನ್ ಸ್ಕೂಲ್‌ನ ಕಾರ್ಯದರ್ಶಿ ನಾಗೇಶ್ವರರಾವ್ ಅವರು ಕಳೆದ ಮೇ 16 ರಂದು ರಾಜಾನುಕುಂಟೆ ರಸ್ತೆಯ ಕುಂಬಳಗುಂಟೆ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್ವರರಾವ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ರಾವ್ ಅವರು ಪ್ರಾಣಾಪಾಯದಿಂದ ಪಾರಾಗಿ ದೊಡ್ಡಬೆಳವಂಗಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೊಡ್ಡಬಳ್ಳಾಪುರ ವೃತ್ತದ ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್‌ಪೆಕ್ಟರ್ ಸಿದ್ದರಾಜು ನೇತೃತ್ವದಲ್ಲಿ ದೊಡ್ಡಬೆಳವಂಗಲ ಪೊಲೀಸರೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ರಾಮನಿವಾಸ್ ಸೆಪಟ್ ತಿಳಿಸಿದ್ದಾರೆ.





