ಬ್ರಹ್ಮಲಶೋತ್ಸವಕ್ಕಿಂತ ಬಡವರಿಗೆ ಮನೆ ನಿರ್ಮಿಸಿ ಪುಣ್ಯ ಸಂಪಾದಿಸಿ: ಕೇಮಾರು ಶ್ರೀ

ಕಾಪು, ಮೇ 30: ಸಮಾಜದಲ್ಲಿ ಶ್ರೀಮಂತ ವರ್ಗದವರು ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ, ಮದುವೆ, ಮೆಹೆಂದಿ ಕಾರ್ಯಕ್ರಮಗಳನ್ನು ನಡೆಸಿ ಹಣವನ್ನು ಪೋಲು ಮಾಡುವುದಕ್ಕಿಂತ ಅಗತ್ಯವುಳ್ಳ ಕಡುಬಡವರಿಗೆ ಮನೆ ನಿರ್ಮಾಣ ಹಾಗೂ ಅರ್ಹ ಶಿಕ್ಷಣಾಕಾಂಕ್ಷಿಗಳಿಗೆ ಶಿಕ್ಷಣ ನೀಡಿದಲ್ಲಿ ಹೇರಳ ಪುಣ್ಯ ಸಂಪಾದನೆ ಮಾಡಬಹುದು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಕಟಪಾಡಿ ಕೋಟೆ ಗ್ರಾಮದ ದೇವರ ತೋಟದಲ್ಲಿ ಕಳೆದ 6 ದಶಕಗಳಿಂದ ವಿದ್ಯುತ್ ಸೌಕರ್ಯವಿಲ್ಲದ ಹಳೆಯ ಪ್ಲಾಸ್ಟಿಕ್ ಹೊದಿಕೆಯ ಮುರುಕಲು ಮನೆ ಯಲ್ಲಿ ವಾಸಿಸುತ್ತಿದ್ದ ಬಡ ರಾಜೀವಿ ಶೆಡ್ತಿ ಕುಟುಂಬಕ್ಕೆ ದಾನಿಗಳ ನೆರವಿನೊಂದಿಗೆ 7.50ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ 700 ಚದರಡಿಯ ನೂತನ ಮನೆ ‘ನಮ್ಮ ಮನೆ’ ಗೃಹಪ್ರವೇಶ ಮತ್ತು ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ವನ್ನು ಬುಧವಾರ ನೆರವೇರಿಸಿ ಅವರು ಮಾತನಾಡುತಿದ್ದರು.
ಮಾನವ ನಿರ್ಮಿತ ಮೂರ್ತಿ ಪೂಜೆಗಿಂತ ದೇವ ನಿರ್ಮಿತ ಮಾನವರ (ಬಡವರ) ಸೇವಾ ಪೂಜೆಯಿಂದ ಜಾಸ್ತಿ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಕಡುಬಡವರಿಗೆ, ಅಶಕ್ತರಿಗೆ, ದುರ್ಬಲರಿಗೆ ಮಾಡುವ ಸೇವೆಯೇ ಭಗವಂತನ ಪೂಜೆಯಾಗಿದ್ದು, ಇದು ನೂರಕ್ಕೆ ನೂರು ಫಲಪ್ರದವಾಗುತ್ತದೆ ಎಂದರು.
ಒಳ್ಳೆಯ ಮನಸ್ಸಿನ ನೂರಾರು ವ್ಯಕ್ತಿಗಳಿಂದ ಉತ್ತಮ ಕಾರ್ಯಗಳು ನಡೆಯುತ್ತಿವೆ. ಸೇವೆ ಪಡೆದವರು ದಾನಿಗಳಿಗೆ ಸದಾ ಕೃತಜ್ಞರಾಗಿರಬೇಕು. ಆಧುನಿಕ ಸೌಕರ್ಯಗಳೊಂದಿಗೆ ಬಡ ಕುಟುಂಬಕ್ಕೆ ಎರಡು ಬೆಡ್‌ರೂಮ್ ಸಹಿತ ಸುಸಜ್ಜಿತ ಮಾಡರ್ನ್ ಶೌಚಾಲಯ, ಹಾಲ್, ಮಾಡರ್ನ್ ಕಿಚನ್ ಸೇರಿದಂತೆ ಸಂಪೂರ್ಣ ಟೈಲ್ಸ್ ನೆಲಹಾಸಿನ ಮನೆಯನ್ನು ಯಾವುದೇ ಪ್ರಚಾರವಿಲ್ಲದೆ ಬಡಕುಟುಂಬವೊಂದಕ್ಕೆ ಚೊಕ್ಕದಾದ ಸುಂದರ ಮನೆ ನಿರ್ಮಾಣದ ಪರಿಕಲ್ಪನೆಯನ್ನು ವಿವಿಧ ದಾನಿಗಳ ನೆರವಿನಿಂದ ಸಾಕಾರಗೊಳಿಸಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಸಮಾಜ ಸೇವಕಿ ವೈಶಾಲಿ ಶೆಟ್ಟಿ ಉಡುಪಿ, ಅಶೋಕ್ ಶೆಟ್ಟಿ ಮೂಡಬೆಟ್ಟು ಗುತ್ತು, ಸಮಾಜ ಸೇವಕ ಗುರ್ಮೆ ಸುರೇಶ ಶೆಟ್ಟಿ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ಎ.ರವೀಂದ್ರನಾಥ ಶೆಟ್ಟಿ, ಕಾಪು ಲೀಲಾಧರ್ ಶೆಟ್ಟಿ, ದಿನಕರ್ ಶೆಟ್ಟಿ ಕುರ್ಕಾಲು, ಹರೀಶ್ಚಂದ್ರ ಅಮೀನ್, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.
ಸಮಾಜ ಸೇವಕಿ ವಿದ್ಯಾಲತಾ ಯು.ಶೆಟ್ಟಿ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ಮನೆ ನಿರ್ಮಾಣದ ರೂವಾರಿ ಕಟಪಾಡಿಯ ವೈದ್ಯ ಡಾ.ಯು.ಕೆ.ಶೆಟ್ಟಿ ಪಾಸ್ತಾವಿಕವಾಗಿ ಮಾತನಾಡಿದರು. ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಕೆ.ಶೆಟ್ಟಿ ದೆಂದೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







