ಜೂ.1ರಂದು ಶೋಭಾಯಾತ್ರೆ: ಸಂಚಾರಕ್ಕೆ ಬದಲಿ ಮಾರ್ಗ
ಉಡುಪಿ, ಮೇ 30: ಉಡುಪಿ ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣಾ ಸಮಾರಂಭದ ಶೋಭಾಯಾತ್ರೆಯು ಜೂ.1ರಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ನಡೆಯಲಿದ್ದು, ಈ ವೇಳೆ ಸಂಚಾರಕ್ಕೆ ಕೆಲವು ಬದಲಿ ಮಾರ್ಗವನ್ನು ಕಲ್ಪಿಸ ಲಾಗಿದೆ.
ಈ ಸಮಯದಲ್ಲಿ ಸರ್ವಿಸ್ ಹಾಗೂ ಸಿಟಿ ಬಸ್‌ನಿಲ್ದಾಣದಿಂದ ಮಂಗಳೂರು, ಕಟಪಾಡಿ, ಅಂಬಲಪಾಡಿ ಕಡೆ ಹೋಗುವ ಎಲ್ಲ ಬಸ್‌ಗಳು ಶಿರಿಬೀಡು, ಬನ್ನಂಜೆ, ಕರಾವಳಿ ಮೂಲಕ ಅಂಬಲಪಾಡಿ ಮಾರ್ಗವಾಗಿ ಹೋಗಬೇಕು ಹಾಗೂ ಮಂಗಳೂರು ಕಡೆಯಿಂದ ಉಡುಪಿಗೆ ಬರುವ ಬಸ್ ಗಳು ಸೇರಿದಂತೆ ಎಲ್ಲ ವಾಹನಗಳು ಅಂಬಲಪಾಡಿ ಕರಾವಳಿ ಜಂಕ್ಷನ್ ಮೂಲಕ ಉಡುಪಿಗೆ ಬರಬೇಕು.
ಜೋಡುಕಟ್ಟೆಯಿಂದ ತ್ರಿವೇಣಿ ವೃತ್ತದವರೆಗೆ ಏಕಮುಖ ಸಂಚಾರ ರಸ್ತೆಯನ್ನು ದ್ವಿಮುಖ ಮಾರ್ಗವಾಗಿ ಮಾರ್ಪಾಡು ಮಾಡಲಾಗಿದ್ದು, ಶೋಭಾಯಾತ್ರೆ ಮೆರವಣಿಗೆಯು ಜೋಡುಕಟ್ಟೆಯಿಂದ ಬರುವ ಎಡಭಾಗದ ರಸ್ತೆಯಲ್ಲಿ ಚಲಿಸುವುದರಿಂದ ಬಲಭಾಗದ ರಸ್ತೆಯನ್ನು ದ್ವಿಮುಖ ಮಾರ್ಗವಾಗಿ ಮಾರ್ಪಾಡು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶೋಭಾಯಾತ್ರೆಯು ಕಿದಿಯೂರು, ಶಿರಿಬೀಡು ಜಂಕ್ಷನ್‌ಗೆ ಬಂದಾಗ ಕುಂದಾಪುರದಿಂದ ಉಡುಪಿಗೆ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನ ಗಳು ಕರಾವಳಿ, ಅಂಬಲಪಾಡಿ, ಬ್ರಹ್ಮಗಿರಿ, ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು. ಕುಂದಾಪುರದಿಂದ ಮಣಿಪಾಲಕ್ಕೆ ಹೋಗುವ ವಾಹನ ಗಳು ಅಂಬಾಗಿಲು, ಕಲ್ಸಂಕ ಮಾರ್ಗವಾಗಿ ಮಣಿಪಾಲಕ್ಕೆ ಹೋಗಬೇಕು. ಮಂಗಳೂರಿನಿಂದ ಬರುವ ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳು ಕಿನ್ನಿಮುಲ್ಕಿ ಸ್ವಾಗತ ಗೋಪುರ ಜೋಡುಕಟ್ಟೆ ಮೂಲಕ ಉಡುಪಿಗೆ ಬರಬೇಕು.
ಶೋಭಾಯಾತ್ರೆಯು ನಡೆಯುವ ಹಿನ್ನಲೆಯಲ್ಲಿ ಲಯನ್ಸ್ ವೃತ್ತದಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಹಾಗೂ ಶಿರಿಬೀಡು ಜಂಕ್ಷನ್‌ನಿಂದ ಕಲ್ಸಂಕದ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.







