ಇಡಿ ಮುಂದೆ ಹಾಜರಾದ ರಾಬರ್ಟ್ ವಾದ್ರ

ಹೊಸದಿಲ್ಲಿ, ಮೇ.30: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರ ಗುರುವಾರದಂದು ಜಮೀನು ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಎದುರಿಸಲು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು.
ಇಡಿ ಕಚೇರಿಗೆ ತೆರಳುವುದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಾದ್ರ, ದೇಶದ ಕಾನೂನು ವ್ಯವಸ್ಥೆ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ವಿರುದ್ಧದ ಸುಳ್ಳು ಆರೋಪಗಳು ಹೋಗುವವರೆಗೂ ಸರಕಾರಿ ಸಂಸ್ಥೆಗಳು ಕಳುಹಿಸುವ ಸಮ್ಮನ್ಸ್‌ಗೆ ಉತ್ತರ ನೀಡುತ್ತಲೇ ಇರುತ್ತೇನೆ ಎಂದು ವಾದ್ರ ತಿಳಿಸಿದ್ದಾರೆ.
ದಿಲ್ಲಿ-ಎನ್‌ಸಿಆರ್, ರಾಜಸ್ತಾನದ ಬಿಕನೇರ್‌ನಲ್ಲಿ ಜಮೀನು ಅತಿಕ್ರಮಣ ಮತ್ತು ವಿದೇಶಗಳಲ್ಲಿ ಆಸ್ತಿ ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರ ಅವರಿಗೆ ಇಡಿ ಸಮ್ಮನ್ಸ್ ಜಾರಿ ಮಾಡಿತ್ತು. ಇಲ್ಲಿಯವರೆಗೆ ನಾನು 11 ಬಾರಿ ಹಾಜರಾಗಿದ್ದು ಅಂದಾಜು 70 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದೇನೆ. ಭವಿಷ್ಯದಲ್ಲೂ ನಾನು ಆರೋಪಮುಕ್ತನಾಗುವವರೆಗೆ ಹೀಗೆಯೇ ಸಹಕರಿಸುತ್ತೇನೆ. ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆ ಮೇಲಿರುವ ವಿಶ್ವಾಸವನ್ನು ಕಡಿಮೆಯಾಗಲು ಸಾಧ್ಯವಿಲ್ಲ ಎಂದು ವಾದ್ರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.







