ಪ್ರಧಾನಿ ಮೋದಿಗೆ ಪರ್ಯಾಯಶ್ರೀ ಶುಭಸಂದೇಶ: ಅಭಿಮಾನಿಗಳಿಂದ ಶ್ರೀಕೃಷ್ಣನಿಗೆ ರಥೋತ್ಸವ

ಉಡುಪಿ, ಮೇ 30: ದೇಶದ ಸಂಸ್ಕೃತಿಯನ್ನು ಉಳಿಸಿ, ಸಂಸ್ಕಾರವನ್ನು ಬೆಳೆಸಿ ಪ್ರಪಂಚದ ಎಲ್ಲಾ ದೇಶಗಳ ಮನ್ನಣೆಗೆ ಪಾತ್ರರಾದ, ದೇಶಕ್ಕಾಗಿ ಹಗಲಿರುಳು ಕೆಲಸ ಮಾಡಿ, ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ 2ನೇ ಬಾರಿ ದೇಶದ ಪ್ರಧಾನಮಂತ್ರಿ ಪದವಿಯನ್ನು ಅಲಂಕರಿಸಿದ ನರೇಂದ್ರ ಮೋದಿ ಅವರಿಗೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀ ಶುಭ ಸಂದೇಶವನ್ನು ಕಳುಹಿಸಿದ್ದಾರೆ.
ದೇಶಕ್ಕಾಗಿ ತಮ್ಮನ್ನು ಮುಡುಪಾಗಿಟ್ಟು ರಾಷ್ಟ್ರಚಿಂತನೆಯನ್ನು ಮೈಗೂಡಿಸಿ ಕೊಂಡು, ಹಿಂದೆ ಮಾಡಿದ ದೇಶದ ಅಭಿವೃದ್ಧಿ ಕೆಲಸಗಳು, ಜನಪರ ಯೋಜನೆ ಗಳಿಗೆ ಭಾರತೀಯರು ಪೂರ್ಣ ಬೆಂಬಲ ನೀಡಿದ್ದಾರೆ. ಈ ಬಾರಿ ಇನ್ನು ಹೆಚ್ಚಿನ ದೇಶಸೇವೆ ಮಾಡುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರನ್ನು ಪ್ರಾರ್ಥಿಸಿ ಶುಭವನ್ನು ಹಾರೈಸುತ್ತೇವೆ ಎಂದು ಪಲಿಮಾರುಶ್ರೀಗಳು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉಡುಪಿಯ ಮೋದಿ ಅಭಿಮಾನಿಗಳಿಂದ ಶ್ರೀಕೃಷ್ಣ ಮಠದಲ್ಲಿ ವಿಶೇಷ ಬ್ರಹ್ಮರಥೋತ್ಸವ ಸೇವೆ ನಡೆಯಿತು.





