ಕುವೈತ್‌ನಲ್ಲಿ ಸಂಕಷ್ಟಕ್ಕೀಡಾದ ಯುವಕರ ಪ್ರಕರಣ: ಮಾಣಿಕ್ಯ ಅಸೋಸಿಯೇಟ್ಸ್ ವಿರುದ್ಧ ಕೇಸು ದಾಖಲು

ಮಂಗಳೂರು, ಮೇ 30: ವಲಸೆ ಕಾಯ್ದೆಯಡಿ ಲೈಸನ್ಸ್ ಪಡೆಯದೇ ಕುವೈತ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ ಮಾಣಿಕ್ಯ ಅಸೋಸಿಯೇಟ್ಸ್ ಕಂಪೆನಿ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಸುಮೊಟೊ ಕೇಸು ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೊವೊಂದರಲ್ಲಿ ಸಂತ್ರಸ್ತ ಯುವಕರು ಕುವೈತ್‌ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಬಿಡಿಸಿಟ್ಟಿದ್ದರು. ವೀಡಿಯೊದಲ್ಲಿ ಮಾತನಾಡಿದ ಗಣೇಶ್ ಎಂಬವರು, ‘ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಕ ಪ್ರಸಾದ್ ಶೆಟ್ಟಿ ಎಂಬವರಿಗೆ 65 ಸಾವಿರ ರೂ. ನೀಡಿ ಜ.7ರಂದು ಕುವೈತ್‌ಗೆ ಬಂದಿದ್ದೇವೆ. ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ’ ಎಂದು ಹೇಳಿದ್ದರು.
ಮಂಗಳೂರಿನಿಂದ ಬರುವಾಗ ಕುವೈತ್‌ನ ಕ್ಯಾಂಬ್ರಿಡ್ಜ್ ಎನ್ನುವ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕುವೈತ್‌ಗೆ ಬಂದ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಆ ಕಂಪನಿಯಲ್ಲಿ 5 ತಿಂಗಳಿನಿಂದ ದುಡಿಯುತ್ತಿದ್ದು, ಈ ತನಕ ಬಿಡಿಕಾಸು ಸಂಬಳವನ್ನೂ ನೀಡಿಲ್ಲ. ಇದರಿಂದ ನಾವು ತೀರಾ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಇದು ಮಾತ್ರವಲ್ಲದೆ ಈಗ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಆಹಾರಕ್ಕಾಗಿ ನಾವು ಯಾರ್ಯಾರಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕರು ಅಲವತ್ತುಕೊಂಡಿದ್ದರು.
ಮಂಗಳೂರಿನಿಂದ ಕುವೈತ್‌ಗೆ ತೆರಳಿದ ತಂಡದಲ್ಲಿ ತುಂಬ ಮಂದಿ ರಮಝಾನ್ ಉಪವಾಸದಲ್ಲಿದ್ದು, ಸಂಬಳವಾಗದೆ ಸಂಕಷ್ಟದಲ್ಲಿದ್ದಾರೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಮಂಗಳೂರಿನ 35 ಮಂದಿ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ 200ಕ್ಕೂ ಅಧಿಕ ಮಂದಿ ಇದ್ದಾರೆ. ಎಲ್ಲರದ್ದೂ ಇದೇ ಪರಿಸ್ಥಿತಿ ಎಂದು ವೀಡಿಯೊದಲ್ಲಿ ತಿಳಿಸಲಾಗಿತ್ತು.







