ಜೂ.2ರಂದು ಕರಾವಳಿಯ ಪ್ರತಿಭೆಗಳಿಂದ ‘ಅಪರಂಜಿ’
ಉಡುಪಿ, ಮೇ 30: ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿ ಜಿಲ್ಲೆಯ ಹಲವು ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯಿಂದ ಮಿಂಚುತಿದ್ದು, ಸಾಕಷ್ಟು ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಇಂಥ ಹಲವು ಪ್ರತಿಭೆಗಳನ್ನು ಸೇರಿಸಿ ಇದೇ ಜೂ.2ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಅಪರಂಜಿ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರಲ್ಲಿ ಒಬ್ಬರಾದ ಅವಿನಾಶ್ ಕಾಮತ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಹೊಸ ಪರಿಕಲ್ಪನೆಯ ಕಾರ್ಯಕ್ರಮವಾಗಿದ್ದು, ಇವರೆಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭಾಪ್ರದರ್ಶನ ನೀಡಲಿದ್ದಾರೆ ಎಂದರು.
ಟಿವಿಯ ಸಾರೆಗಾಮಪಾ ಕಾರ್ಯಕ್ರಮಗಳಲ್ಲಿ ಮಿಂಚಿರುವ, ಈಗ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕಟಪಾಡಿಯ ಡಾ.ಅಭಿಷೇಕ ರಾವ್, ಉಡುಪಿಯ ರಜತ್ ಮಯ್ಯ, ಖ್ಯಾತ ಹಿನ್ನೆಲೆ ಗಾಯಕಿಯರಾದ ಕೆಜಿಎಫ್ ಖ್ಯಾತಿಯ ಐರಾ ಆಚಾರ್ಯ, ವೈಷ್ಣವಿ ರವಿ, ರೂಬಿಕ್ ಕ್ಯೂಬ್ ತಜ್ಞ ಪ್ರಥ್ವೀಶ್ ಕೆ, ಕಲಾವಿದ ಪ್ರದೀಶ್ ಕೆ., ಯೋಗದ ಭಂಗಿಗಳಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ತನುಶ್ರೀ ಪಿತ್ರೋಡಿ, ಖ್ಯಾತ ಸ್ಯಾಕ್ಸೋಫೋನ್ ವಾದಕಿ ಅಂಜಲಿ ಶ್ಯಾನುಭಾಗ್ ಹಾಗೂ ಟಿವಿ ಆ್ಯಂಕರ್ ಅವಿನಾಶ್ ಕಾಮತ್ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.
ಜೂ.2ರ ರವಿವಾರ ಸಂಜೆ 4:30ಕ್ಕೆ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಮಂಗಳೂರಿನ ಬಹುಮುಖ ಪ್ರತಿಭೆ ನಟಿ ಸೌಜನ್ಯ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಕಲ್ಪನೆ, ಸಂಯೋಜನೆ ಹಾಗೂ ನಿರೂಪಣೆ ಅವಿನಾಶ್ ಕಾಮತ್ ಅವರದ್ದಾಗಿದೆ.
ಇತ್ತೀಚೆಗೆ ಬಸ್ ಅಪಘಾತದಲ್ಲಿ ತನ್ನ ಬಲಗೈಯನ್ನೇ ಕಳೆದುಕೊಂಡಿರುವ ಎಂಜಿಎಂ ಕಾಲೇಜಿನ ಬಡ ಅಂತಿಮ ಪದವಿ ವಿದ್ಯಾರ್ಥಿ ಅಜಿತ್ ಶೆಟ್ಟಿ ಅವರಿಗೆ ಈ ಕಾರ್ಯಕ್ರಮದ ಮೂಲಕ ದೇಣಿಗೆಯನ್ನು ಸಂಗ್ರಹಿಸಿ ನೀಡಲಾಗುವುದು ಎಂದು ಅವಿನಾಶ್ ಕಾಮತ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಜೆ ಅಂಬರೀಶ್, ಪ್ರಮೋದ್ ಶೆಟ್ಟಿ, ಎಂ.ರವಿ, ಶ್ರೇಯಸ್ ಕೋಟ್ಯಾನ್ ಉಪಸ್ಥಿತರಿದ್ದರು.







