ಇಸ್ಲಾಂ ಬಗೆಗಿನ ತಪ್ಪು ಗ್ರಹಿಕೆಗಳು ಹಲವು ಅಪನಂಬಿಕೆಗಳಿಗೆ ಕಾರಣ ವಾಗಿದೆ-ರಫೀಉದ್ಧೀನ್ ಕುದ್ರೋಳಿ

ಮಂಗಳೂರು : ಇಸ್ಲಾಂನ ಬಗೆಗೆ ಇರುವ ಹಲವು ತಪ್ಪು ಗ್ರಹಿಕೆಗಳೇ ಅಪನಂಬಿಕೆಗಳಿಗೆ ಕಾರಣವಾಗಿದೆ ಎಂದು ಯುನಿವೆಫ್‌ನ ರಾಜ್ಯಾಧ್ಯಕ್ಷ ರಫೀಉದ್ಧೀನ್ ಕುದ್ರೋಳಿ ಹೇಳಿದ್ದಾರೆ.
ಯುನಿವೆಫ್ ಕರ್ನಾಟಕ ಯೂನಿವರ್ಸಲ್ ವೆಲ್ಫೇರ್ ಫೋರಂ ವತಿಯಿಂದ ನಗರದ ಕಂಕನಾಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಹಮ್ಮಿಕೊಂಡ ಇಫ್ತಾರ್ ಕೂಟ ಮತ್ತು ಸ್ನೇಹ ಮಿಲನ ಸಮಾರಂಭದಲ್ಲಿ ‘ಸೌಹಾರ್ದ ಸಮಾಜ’ ವಿಷಯವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಇತರ ಧರ್ಮೀಯರಿಗೂ ನಮ್ಮ ಧರ್ಮದ ಬಗ್ಗೆ ತಿಳಿಸಬೇಕಾಗುತ್ತದೆ. ಇಸ್ಲಾಂ ಆಚರಣೆಯ ಬಗೆಗೆ ಇರುವ ಅಜ್ಞಾನದಿಂದ ಕೆಲವರು ಕೆಲವು ಪದಗಳನ್ನು ತಪ್ಪಾಗಿ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಪವಿತ್ರ ಕುರಾಆನ್ ಗ್ರಂಥವನ್ನು ತಪ್ಪಾಗಿ ವ್ಯಾಖ್ಯಾನ ಮಾಡುವುದು ನಡೆಯುತ್ತಿದೆ .ಇದರಿಂದಾಗಿ ಕೋಮುದ್ವೇಷ ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡಿಸುವ , ಪರಸ್ಪರ ಅಪನಂಬಿಕೆಗಳನ್ನು ಸೃಷ್ಟಿಸುವ ವಾತಾವರಣ ನಡೆಯುತ್ತಿದೆ. ಇತರ ಧರ್ಮಗ್ರಂಥಗಳನ್ನು ನಾವು ಓದಬೇಕಾಗಿದೆ. ಯಾವ ಧರ್ಮವೂ ಪರಸ್ಪರ ವೈರತ್ವವನ್ನು ಧ್ವೇಷ ಸಾಧನೆಯ ಬಗ್ಗೆ ಹೇಳುವುದಿಲ್ಲ. ಇದರಿಂದ ಪರಸ್ಪರ ನಂಬಿಕೆ ವಿಶ್ವಾಸದ ವಾತವರಣ ಸೌಹಾರ್ದತೆಯ ಸಮಾಜ ನಿರ್ಮಿಸುವ ಪ್ರಯತ್ನ ಮಾಡಬಹುದು ಎಂದು ರಫೀಉದ್ಧೀನ್ ಕುದ್ರೋಳಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಬಿ.ಎನ್ .ಪುಷ್ಪರಾಜ್ ಸೌಹಾರ್ದ ಸಮಾಜಕ್ಕಾಗಿ ಎಲ್ಲಾ ಧರ್ಮದ ಜನರ ನಡುವೆ ಪರಸ್ಪರ ವಿಶ್ವಾಸ, ನಂಬಿಕೆ ಮುಖ್ಯ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ನಾವು ಅರಿತುಕೊಳ್ಳುವುದು ಮುಖ್ಯ ಆ ಮೂಲಕ ಸಮಾಜವನ್ನು ಅರಿತುಕೊಳ್ಳಲು ಸಾಧ್ಯ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಅಮೀರ್ ತುಂಬೆ ಸಮಾಜದ ನಡುವೆ ಇದ್ದ ಸೌರ್ಹಾದ ವಾತಾವರಣ ಮರಳಿ ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಶುಭ ಹಾರೈಸಿದರು. ದಕ್ಷಿಣ ಕನ್ನಡ ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ವೈ ಮುಹಮ್ಮದ್ ಬ್ಯಾರಿ ಎಡಪದವು ಉಪಸ್ಥಿತರಿದ್ದರು. ಯುನಿವೆಫ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ಲಾ ಪಾರೆ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.











