ಸೇಬುಹಣ್ಣಿನ ತೂಕದ ಜಗತ್ತಿನ ಅತಿ ಸಣ್ಣ ಮಗು ಜನನ

ಲಾಸ್ ಏಂಜಲಿಸ್ (ಅಮೆರಿಕ), ಮೇ 30: ಅಮೆರಿಕದ ಕ್ಯಾಲಿಫೋರ್ನಿಯದ ಆಸ್ಪತ್ರೆಯೊಂದರಲ್ಲಿ ಅತ್ಯಂತ ಸಣ್ಣ ಮಗುವೊಂದು ಜನಿಸಿದೆ. ಈ ಹೆಣ್ಣು ಮಗು ಹುಟ್ಟುವಾಗ ಅದರ ತೂಕ ಕೇವಲ 245 ಗ್ರಾಂ ಆಗಿತ್ತು. ಅಂದರೆ ಒಂದು ದೊಡ್ಡ ಸೇಬು ಹಣ್ಣು ತೂಗುವಷ್ಟು!
ಈ ಮಗುವಿಗೆ ಆಸ್ಪತ್ರೆಯ ಸಿಬ್ಬಂದಿ ‘ಸೇಬೀ’ ಎಂಬ ಅಡ್ಡ ಹೆಸರಿಟ್ಟಿದ್ದಾರೆ. ಮಗುವಿನ ತಾಯಿ 23 ವಾರ ಮತ್ತು 3 ದಿನಗಳ ಗರ್ಭದ ಬಳಿಕ ಮಗುವನ್ನು ಹೆತ್ತಿದ್ದಾರೆ.
ನೀವು ಒಂದು ಗಂಟೆ ನಿಮ್ಮ ಮಗಳೊಂದಿಗೆ ಕಳೆಯಬಹುದು, ಬಳಿಕ ಮಗು ಸಾಯುತ್ತದೆ ಎಂಬುದಾಗಿ ವೈದ್ಯರು ಮಗುವಿನ ತಂದೆಗೆ ಹೇಳಿದ್ದರು.
‘‘ಆದರೆ, ಆ ಒಂದು ಗಂಟೆ ಎರಡು ಗಂಟೆಗಳಾದವು. ಎರಡು ಗಂಟೆಗಳು ಒಂದು ದಿನವಾಯಿತು. ದಿನ ಒಂದು ವಾರವಾಯಿತು’’ ಎಂದು ಆಸ್ಪತ್ರೆಯು ಬಿಡುಗಡೆ ಮಾಡಿದ ವೀಡಿಯೊ ಒಂದರಲ್ಲಿ ಮಗುವಿನ ತಾಯಿ ಹೇಳಿದ್ದಾರೆ.
ವೈದ್ಯರು ಡಿಸೆಂಬರ್‌ನಲ್ಲಿ ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರದೆಗೆದರು. ಆಸ್ಪತ್ರೆಯ ಶಿಶು ತೀವ್ರ ನಿಗಾ ಘಟಕದಲ್ಲಿ ಸುಮಾರು ಐದು ತಿಂಗಳುಗಳನ್ನು ಕಳೆದ ಬಳಿಕ, ಸೇಬೀಯನ್ನು ಈ ತಿಂಗಳ ಆದಿ ಭಾಗದಲ್ಲಿ ಮನೆಗೆ ಕಳುಹಿಸಿಕೊಡಲಾಗಿದೆ. ಆಸ್ಪತ್ರೆಯಿಂದ ಹೊರಹೋಗುವಾಗ ಮಗು 2.2 ಕೆ.ಜಿ. ತೂಗುತ್ತಿತ್ತು.
ಈ ಮಗುವೊಂದು ಪವಾಡ!
‘‘ಈ ಮಗು ಒಂದು ಪವಾಡವೇ ಸರಿ’’ ಎಂಬುದಾಗಿ ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಿದ ನರ್ಸ್‌ಗಳ ಪೈಕಿ ಒಬ್ಬರಾದ ಕಿಮ್ ನಾರ್ಬಿ ಹೇಳುತ್ತಾರೆ.
ಸಾವು-ಬದುಕಿನ ಹೋರಾಟದಲ್ಲಿದ್ದ ಮಗು ಬದುಕಿನತ್ತ ವಾಲುವಂತೆ ಅವರು ಮಾಡಿದ್ದರು.
‘‘ಸೇಬಿ ಎಷ್ಟು ಸಣ್ಣಗಿದ್ದಳೆಂದರೆ ಅವಳು ಹಾಸಿಗೆಯಲ್ಲಿ ಕಾಣುತ್ತಲೇ ಇರಲಿಲ್ಲ’’ ಎಂದು ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಇನ್ನೋರ್ವ ನರ್ಸ್ ಎಮ್ಮಾ ವೈಸ್ಟ್ ಹೇಳುತ್ತಾರೆ.







