ಮಾವು-ಹಲಸು ಮೇಳಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ
ಬೆಂಗಳೂರು, ಮೇ 30: ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯಿಂದ ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಮೇಳದಲ್ಲಿ ವಿವಿಧ ಜಿಲ್ಲೆಗಳಿಂದ 100ಕ್ಕೂ ಅಧಿಕ ಮಾವು ಬೆಳೆಗಾರರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 20, ಶಿವಮೊಗ್ಗ ಹಲಸು ಬೆಳೆಗಾರರು ಮಾವು ಸಂಸ್ಕರಿತ ಪದಾರ್ಥಗಳ 9 ಸಂಸ್ಥೆಗಳು ಪಾಲ್ಗೊಂಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆದಿದ್ದ ವಿವಿಧ ತಳಿಯ ಮಾವುಗಳನ್ನು ಮಾರಾಟಕ್ಕಿಡಲಾಗಿತ್ತು.
ಪ್ರಮುಖ ಜಾತಿಯ ಮಾವುಗಳಾದ ಬಾದಾಮಿ, ರಸಪುರಿ, ಮಲ್ಲಿಕ, ಸೇಂದುರಾ, ಸಕ್ಕರೆ ಗುತ್ತಿ, ಮಲಗೋವಾ, ಬಂಗನಪಲ್ಲಿ, ತೋತಾಪುರಿ, ಕಾಲಪಾಡ್, ಅಬ್ರರಾಪಾಲಿ, ಕೇಸರ್, ನೀಲಂ, ಇಮಾಮ್ ಪಸದ್ ಸೇರಿದಂತೆ ಅನೇಕ ರೀತಿಯ ಮಾವುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು. ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ಜನರು ಮಾವು ಹಾಗೂ ಹಲಸುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಮಾವು ಮತ್ತು ಹಲಸು ಮೇಳದಲ್ಲಿ ಕ್ರಾಬೈಡ್ ಮುಕ್ತ ಎಥಲಿನ್ ಅನಿಲದಿಂದ ನೈಸರ್ಗಿಕವಾಗಿ ಮಾಗಿಸಿರುವ ಮಾವಿನ ಹಣ್ಣುಗಳನ್ನು ನೆರವಾಗಿ ಬೆಳೆಗಾರರಿಂದ ಬಳಕೆದಾರರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸಲು ಮೇಳದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಉಳಿದಂತೆ ಮಾವು ಬೆಳೆಗಾರರಿಗೆ ಮಧ್ಯವರ್ತಿಗಳಲ್ಲದೆ ಮುಕ್ತ ನೇರ ಮಾರುಕಟ್ಟೆಯ ಮೇಳದ ಮೂಲಕ ಕಲ್ಪಿಸಲಾಗಿತ್ತು.
ನಗರದಲ್ಲಿ ಕಾರ್ಯನಿರ್ವಸುತ್ತಿರುವ ಹಣ್ಣು, ತರಕಾರಿ, ಸರಬರಾಜುದಾರರ ಸಗಟು ಮತ್ತು ವ್ಯಾಪಾರಸ್ಥರೊಂದಿಗೆ ಮಾವು ಬೆಳೆಗಾರರಿಗೆ ಸಂಪರ್ಕ ಕಲ್ಪಿಸಲಾಗಿದ್ದು, ನೇರವಾಗಿ ರೈತರಿಂದ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಮನುಗೂಳಿ, ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು







