ಪ.ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ
ಟಿಎಂಸಿ ಕಾರ್ಯಕರ್ತರ ಕೃತ್ಯ: ಆರೋಪ

ಸಾಂದರ್ಭಿಕ ಚಿತ್ರ
ಕೋಲ್ಕತ, ಮೇ 30: ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ಕೇತುಗ್ರಾಮ ಎಂಬಲ್ಲಿ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಹೊಸದಿಲ್ಲಿಯಲ್ಲಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದ ಹಿನ್ನೆಲೆಯಲ್ಲಿ 50 ವರ್ಷದ ಬಿಜೆಪಿ ಕಾರ್ಯಕರ್ತ ಸುಶೀಲ್ ಮಂಡಲ್ ಎಂಬಾತ ಬಿಜೆಪಿ ಧ್ವಜಗಳನ್ನು ಅಳವಡಿಸುತ್ತಿದ್ದಾಗ ಕೆಲವು ವ್ಯಕ್ತಿಗಳು ದಾಳಿ ನಡೆಸಿ ಮಾರಕಾಯುಧಗಳಿಂದ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಟಿಎಂಸಿ ಕಾರ್ಯಕರ್ತರೇ ಕಾರಣ. ರಾಜಕೀಯ ದ್ವೇಷದಿಂದ ಕಳೆದ ಕೆಲವು ದಿನಗಳಿಂದ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಆರೋಪವನ್ನು ಸ್ಥಳೀಯ ಟಿಎಂಸಿ ಮುಖಂಡರು ನಿರಾಕರಿಸಿದ್ದಾರೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಶಂಕಿತ ವ್ಯಕ್ತಿಗಳನ್ನು ಹೆಸರಿಸಲಾಗಿದೆ. ರಾಜಕೀಯ ಆರೋಪ-ಪ್ರತ್ಯಾರೋಪದ ಆಟ ಸಹಜವಾಗಿಯೇ ಆರಂಭವಾಗಿದೆ. ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದು ತನಿಖೆ ಮುಂದುವರಿದಿದೆ. ಯಾರ ಕೃತ್ಯವಿದು ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿಯ ಅಧಿಪತ್ಯಕ್ಕೆ ಸವಾಲೆಸೆದಿದ್ದ ಬಿಜೆಪಿ ಉತ್ತಮ ಸಾಧನೆ ತೋರಿದೆ. ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಹತಾಶೆಗೊಂಡಿರುವ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.







