ಇಂದು ಪಾಕ್-ವಿಂಡೀಸ್ ಮುಖಾಮುಖಿ

ನಾಟಿಂಗ್‌ಹ್ಯಾಮ್, ಮೇ 30: ಅಚ್ಚರಿ ಫಲಿತಾಂಶ ದಾಖಲಿಸಲು ಹೆಸರುವಾಸಿಯಾಗಿರುವ ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಶುಕ್ರವಾರ ನಡೆಯಲಿರುವ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಸೆಣಸಾಡಲಿವೆ.
ಕಳೆದ 10 ಏಕದಿನ ಪಂದ್ಯಗಳಲ್ಲಿ ಸೋಲುಂಡಿರುವ ಪಾಕಿಸ್ತಾನ ವಿಶ್ವಕಪ್‌ಗೆ ಉತ್ತಮ ತಯಾರಿ ನಡೆಸಿಲ್ಲ. ವಿಶ್ವಕಪ್‌ನ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕ್ ತಂಡ ಕ್ರಿಕೆಟ್ ಶಿಶು ಅಫ್ಘಾನಿಸ್ತಾನಕ್ಕೆ ಶರಣಾಗಿತ್ತು. ಬಾಂಗ್ಲಾದೇಶ ವಿರುದ್ಧ ಎರಡನೇ ಅಭ್ಯಾಸ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿದೆ.
2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಯಲ್ಲಿ ನೀಡಿದ ಪ್ರದರ್ಶನವನ್ನೇ ಸ್ಫೂರ್ತಿಯಾಗಿಸಿಕೊಳ್ಳಲು ಸರ್ಫರಾಝ್ ಅಹ್ಮದ್ ನೇತೃತ್ವದ ಪಾಕ್ ತಂಡ ಎದುರು ನೋಡುತ್ತಿದೆ. 2017ರಲ್ಲಿ ಕೂಡ ಪಾಕ್ ಇದೇ ಸ್ಥಿತಿಯಲ್ಲಿತ್ತು. ಟೂರ್ನಿಯ ಆರಂಭದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತಕ್ಕೆ 124 ರನ್‌ನಿಂದ ಸೋತಿದ್ದ ಪಾಕ್ ಆ ಬಳಿಕ ದ.ಆಫ್ರಿಕ, ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ತಲುಪಿತ್ತು. ಫೈನಲ್‌ನಲ್ಲಿ ಭಾರತವನ್ನು 180 ರನ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಪಾಕಿಸ್ತಾನ ತಂಡ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಸಾಂಪ್ರದಾಯಿಕವಾಗಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತದೆ. ಪಾಕ್ ತಂಡದಲ್ಲಿ ಬಾಬರ್ ಆಝಮ್ ಹಾಗೂ ಫಾಕರ್ ಝಮಾನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಾಹೀನ್‌ಅಫ್ರಿದಿ, ಮುಹಮ್ಮದ್ ಆಮಿರ್, ವಹಾಬ್ ರಿಯಾಝ್ ಹಾಗೂ ಹಸನ್ ಅಲಿ ಅವರಿದ್ದಾರೆ. ಇವರು ವಿಶ್ವದ ಯಾವುದೇ ಬ್ಯಾಟಿಂಗ್ ಸರದಿಗೆ ಸವಾಲಾಗಬಲ್ಲರು.
ಆದರೆ, ಪಾಕಿಸ್ತಾನಕ್ಕೆ ತನ್ನ ಕಳಪೆ ಫೀಲ್ಡಿಂಗ್ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ವಿಶ್ವಕಪ್ ಟೂರ್ನಿಯಲ್ಲಿ ಕೈ ಸುಟ್ಟುಕೊಂಡಿದೆ. ಮತ್ತೊಂದೆಡೆ, ವೆಸ್ಟ್‌ಇಂಡೀಸ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದೆ. ಈ ವರ್ಷಾರಂಭದಲ್ಲಿ ಸ್ವದೇಶದಲ್ಲಿ ವಿಶ್ವಕಪ್ ಫೇವರಿಟ್ ಇಂಗ್ಲೆಂಡ್ ವಿರುದ್ಧ ಸರಣಿಯನ್ನು 2-2ರಿಂದ ಸಮಬಲಗೊಳಿಸಿ ಬಿಸಿ ಮುಟ್ಟಿಸಿದೆ. ವಿಂಡೀಸ್ ತಂಡದಲ್ಲಿ ಘಟಾನುಘಟಿಗಳಾದ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಶೈ ಹೋಪ್ ಅವರಿದ್ದಾರೆ. ಈ ಮೂವರು ಯಾವುದೇ ಎದುರಾಳಿಯ ಬೌಲಿಂಗ್ ದಾಳಿಯನ್ನು ಪುಡಿಗೈಯ್ಯಬಲ್ಲರು.
ವಿಂಡೀಸ್ ತಂಡ ದಕ್ಷಿಣ ಆಫ್ರಿಕ ವಿರುದ್ಧ ಆಡಬೇಕಾಗಿದ್ದ ಮೊದಲ ಅಭ್ಯಾಸ ಪಂದ್ಯ ಮಳೆಗಾಹುತಿಯಾಗಿತ್ತು. ನ್ಯೂಝಿಲ್ಯಾಂಡ್ ವಿರುದ್ಧ ಆಡಿದ್ದ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ 421 ರನ್ ಗಳಿಸಿದ್ದ ವಿಂಡೀಸ್ ತನ್ನ ಬ್ಯಾಟಿಂಗ್ ಶಕ್ತಿಯನ್ನು ತೋರ್ಪಡಿಸಿತ್ತು.
ವಿಂಡೀಸ್ ಬೌಲಿಂಗ್ ವಿಭಾಗ ಸ್ವಲ್ಪ ದುರ್ಬಲವಾಗಿದೆ. ಆದರೆ ತಂಡದಲ್ಲಿ ಬಲಿಷ್ಠ ಆಲ್‌ರೌಂಡರ್‌ಗಳಿದ್ದು ಹಲವು ಆಯ್ಕೆಗಳಿವೆ. ಪಾಕ್ ನಾಯಕ ಅಹ್ಮದ್ ವೇಗದ ಬೌಲರ್ ಮುಹಮ್ಮದ್ ಆಮಿರ್ ಮೇಲೆ ವಿಶ್ವಾಸವಿಟ್ಟುಕೊಂಡಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಆಮಿರ್ 2011 ಹಾಗೂ 2015ರ ವಿಶ್ವಕಪ್‌ನ್ನು ತಪ್ಪಿಸಿಕೊಂಡಿದ್ದರು.







