ಜೂ.1ರಿಂದ ಮರಳು ದಿಬ್ಬ ತೆರವು; ಸಾಗಾಟ ನಿಷೇಧ
ಮಂಗಳೂರು, ಮೇ 31: ದ.ಕ. ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝೆಡ್) ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳು ಸಾಗಾಟ ಮಾಡುವುದನ್ನು ಜೂನ್ 1ರಿಂದ ಆಗಸ್ಟ್ 31ರವರೆಗೆ ನಿಷೇಧಿಸಿದೆ.
2018-19ನೇ ಸಾಲಿನಲ್ಲಿ ಗುರುತಿಸಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಈ ಮೊದಲು ಅವಕಾಶ ನೀಡಲಾಗಿತ್ತು. ಇನ್ನು ಮೂರು ತಿಂಗಳುಗಳ ಕಾಲ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳು ಸಾಗಾಟ ಮಾಡುವು ದನ್ನು ನಿಷೇಧಿಸಲಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಸರಕಾರಿ ಹಾಗೂ ಇತರ ಕಾಮಗಾರಿಗಳಿಗೆ ಮರಳನ್ನು ಪರವಾನಿಗೆಯೊಂದಿಗೆ ಪೂರೈಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಮೀನುಗಳ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ. ಈ ಅವಧಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವುದರಿಂದ ಮೀನುಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟಾಗುತ್ತದೆ.
ನದಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳನ್ನು ನದಿ ಮತ್ತು ನದಿಯ ದಡದಿಂದ ಮೇಲೆ ಕಡ್ಡಾಯವಾಗಿ ಇಡಬೇಕು. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ದಿಬ್ಬವನ್ನು ತೆರವುಗೊಳಿಸುವುದು ಕಂಡುಬಂದಲ್ಲಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತವು ಆದೇಶಿಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು (ಪ್ರಭಾರ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.





