ಆಡಳಿತದಲ್ಲಿ ನೈಪುಣ್ಯತೆ-ಜನಪ್ರಿಯತೆ ಎರಡೂ ಕಾಣಿಸುತ್ತಿಲ್ಲ: ಸಿಎಂ ಕುಮಾರಸ್ವಾಮಿಗೆ ಸ್ಪೀಕರ್ ರಮೇಶ್ ಕುಮಾರ್ ಪತ್ರ

ಬೆಂಗಳೂರು, ಮೇ 31: ಇಪ್ಪತ್ತು ತಿಂಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಯಶಸ್ವಿ ಆಡಳಿತ ನೀಡಿದ ನೀವು ಇದೀಗ ಒಂದು ವರ್ಷದ ಅವಧಿಯಲ್ಲಿ ಆಡಳಿತದಲ್ಲಿ ನೈಪುಣ್ಯತೆಯಾಗಲಿ, ಜನಪ್ರಿಯತೆಯಾಗಲಿ ಕಾಣಿಸುತ್ತಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
‘ಒಂದು ವರ್ಷದಿಂದ ಮೈತ್ರಿ ಸರಕಾರದ ಜವಾಬ್ದಾರಿಯನ್ನ ಹೊತ್ತು ತಾವು ನಡೆಸುತ್ತಿದ್ದೀರಿ. ಸರಕಾರದಲ್ಲಿ ಎಲ್ಲರನ್ನ ಮತ್ತು ಎಲ್ಲವನ್ನ ಸರಿದೂಗಿಸಿಕೊಂಡು ಹೋಗಬೇಕಾದ ಒತ್ತಡದ ಸನ್ನಿವೇಶದಲ್ಲಿ ನೀವು ಸರಕಾರವನ್ನ ಮುನ್ನಡೆಸುತ್ತಿದ್ದೀರಿ ಅನ್ನುವುದು ನನಗೆ ಗೊತ್ತು. ಆದರೆ ಈ ಒತ್ತಡವನ್ನ ಸಮರ್ಪಕವಾಗಿ ನಿರ್ವಹಿಸುವಲ್ಲಿ ನೀವು ಎಡವುತ್ತಿದ್ದೀರಾ ಅನ್ನೋದು ನನ್ನ ಭಾವನೆ. ಈ ಹಿಂದೆಯೂ ತಾವು ಸಮ್ಮಿಶ್ರ ಸರಕಾರವನ್ನ ಯಶಸ್ವಿಯಾಗಿ 20 ತಿಂಗಳುಗಳ ಕಾಲ ನಡೆಸಿದವರು. ಆ ಮೂಲಕ ರಾಜ್ಯದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು ನೀವು. ಆದರೆ ಈ ಬಾರಿಯ ಸರಕಾರದಲ್ಲಿ ನಿಮ್ಮ ಆಡಳಿತ ನೈಪುಣ್ಯತೆಯಾಗಲಿ, ಜನಪ್ರಿಯತೆಯಾಗಲಿ ಯಾವುದು ನನಗೆ ಕಾಣಿಸಲಿಲ್ಲ.
ನೀವು ಸಿಎಂ ಆಗಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು. ಅದರಲ್ಲೂ ಮೈತ್ರಿ ನಾಯಕನಾಗಿ ನೀವು ಇನ್ನು ಹೆಚ್ಚು ಪ್ರಜಾತಾಂತ್ರಿಕವಾಗಿ ವರ್ತಿಸಬೇಕೆನ್ನುವುದು ನನ್ನ ಅಭಿಪ್ರಾಯ. ನಿಮ್ಮ ಆಡಳಿತ ವೈಖರಿ ಹಾಗೂ ಸಾರ್ವಜನಿಕವಾದ ಕೆಲವೊಂದು ನಡೆಗಳು ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟಿರುವ ನನಗೆ ಅಷ್ಟೊಂದು ಸಮಂಜಸ ಅನ್ನಿಸಲಿಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ಅನ್ಯಥಾ ಭಾವಿಸಬಾರದು ಎಂದು ರಮೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.





