ಉಡುಪಿ ಜಿಲ್ಲೆಯ ರಾ.ಹೆ.ಯ 18 ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್
ಸಿಸಿ ಕ್ಯಾಮೆರಾ ಸಹಿತ ಸಿಗ್ನಲ್ ಅಳವಡಿಕೆಗೆ ಪ್ರಾಧಿಕಾರಕ್ಕೆ ಪ್ರಸ್ತಾವನೆ

ಉಡುಪಿ, ಮೇ 31: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಮತ್ತು 169(ಎ)ರಲ್ಲಿ ಒಟ್ಟು 18 ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮೆರಾ ಸಹಿತ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕುರಿತ ಪ್ರಸ್ತಾವನೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ರಾಷ್ಟ್ರಿೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದೆ.
ಪ್ರಮುಖ ಜಂಕ್ಷನ್‌ಗಳಲ್ಲಿನ ಅಪಘಾತಗಳ ಸಂಖ್ಯೆ, ಟ್ರಾಫಿಕ್ ಸಮಸ್ಯೆ, ವಾಹನ ದಟ್ಟನೆಯನ್ನು ಮನಗಂಡು ಈ ಹಿಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ, ಅಂಬಲಪಾಡಿ ಹಾಗೂ ಸಂತೆಕಟ್ಟೆ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳ ವಡಿಸುವಂತೆ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಇದೀಗ ಈಗಿನ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಚ್ಚುವರಿಯಾಗಿ ಪಡುಬಿದ್ರೆ, ಉದ್ಯಾವರ ಬಲಾಯಿಪಾದೆ, ಅಂಬಾಗಿಲು, ಕುಂದಾಪುರದ ಸಂಗಮ್, ತಲ್ಲೂರು ಹಾಗೂ ಹೆಮ್ಮಾಡಿ ಸೇರಿದಂತೆ ಒಟ್ಟು ಆರು ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಅದೇ ರೀತಿ ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಒಟ್ಟು ಒಂಭತ್ತು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಮಲ್ಪೆ ಬಸ್ ನಿಲ್ದಾಣ, ಬನ್ನಂಜೆ, ಶಿರಿಬೀಡು, ಕಲ್ಸಂಕ, ಎಂಜಿಎಂ ಕಾಲೇಜು, ಮಣಿಪಾಲ ಸಿಂಡಿಕೇಟ್ ಸರ್ಕಲ್, ಟೈಗರ್ ಸರ್ಕಲ್, ಎಂಐಟಿ ಜಂಕ್ಷನ್‌ಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ.
ಡಿವೈಎಸ್ಪಿ ನೇತೃತ್ವದಲ್ಲಿ ಈ ಸ್ಥಳಗಳ ಸಂಚಾರ ದಟ್ಟನೆಯನ್ನು ಪರಿಶೀಲಿಸಿ ಎಲ್ಲೆಲ್ಲಿ ಸಿಗ್ನಲ್‌ಗಳ ಅಗತ್ಯವಿದೆ ಎಂಬುದನ್ನು ಗುರುತಿಸಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಈ ಸಂಬಂಧ ಮಂಗಳೂರಿನ ತಾಂತ್ರಿಕ ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗಿದ್ದು, ಈ ಕುರಿತ ಸಂಪೂರ್ಣ ವಿವರವನ್ನು ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.
‘ಮೂರು ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವಂತೆ ಈ ಹಿಂದಿನ ಎಸ್ಪಿ ಕಳುಹಿಸಿದ ಪ್ರಸ್ತಾವನೆ ಇನ್ನು ಬಾಕಿ ಇದೆ. ಈ ಸಂಬಂಧ ಮೂರು ಕೊಟೇಶನ್ ಗಳನ್ನು ಕೂಡ ನಾವು ಕಳುಹಿಸಿಕೊಟ್ಟಿದ್ದೇವೆ. ಇದೀಗ ಹೆಚ್ಚುವರಿಯಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ಜಂಕ್ಷನ್‌ಗಳ ಹೆಸರನ್ನು ಪ್ರಸ್ತಾಪಿಸಿದ್ದೇವೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಪ್ರಾಧಿಕಾರ ಈ ಪ್ರಸ್ತಾವನೆಯನ್ನು ತನ್ನ ಕಮಿಟಿಯ ಮುಂದೆ ಇಟ್ಟು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ. ಇದರ ವೆಚ್ಚವನ್ನು ಪ್ರಾಧಿಕಾರವೇ ಭರಿಸಲಿದೆ. ನಾವು ಗುರುತಿಸಿರುವ ಈ ಎಲ್ಲ ಜಂಕ್ಷನ್‌ಗಳಲ್ಲಿ ಹೆಚ್ಚಿನ ಅಪಘಾತಗಳು ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚು ಹೆಚ್ಚು ಸಂಭವಿಸುತ್ತಿರುತ್ತಿದೆ. ಆದುದ ರಿಂದ ಈ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವುದು ಅನಿವಾರ್ಯವಾಗಿದೆ. ಈ ಕುರಿತು ಮುಂದಿನ ನಿರ್ಧಾರವನ್ನು ಪ್ರಾಧಿಕಾರ ತೆಗೆದುಕೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ.







