ಜೂ. 2: ಅಲೆವೂರಿನಲ್ಲಿ ಕೃಷಿ ಮಾಹಿತಿ ಶಿಬಿರ
ಉಡುಪಿ, ಮೇ 31: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಕುಕ್ಕಿಕಟ್ಟೆ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಯೋಗದೊಂದಿಗೆ ಜೂ. 2ರ ಬೆಳಗ್ಗೆ 10ಗಂಟೆಯಿಂದ ಅಪರಾಹ್ನ 1 ಗಂಟೆವರೆಗೆ ಕೃಷಿ ಮತ್ತು ಹೈನುಗಾರಿಕೆ ಕುರಿತ ಕೃಷಿ ಮಾಹಿತಿ-ವಿಚಾರಗೋಷ್ಠಿ ಕೊರಂಗ್ರಪಾಡಿ ಸಹಕಾರಿ ವ್ಯವಸಾಯ ಸಂಘದ ಅಲೆವೂರು ಶಾಖೆಯ ‘ಸಮೃದ್ಧಿ ಸಭಾಭವನ’ ದಲ್ಲಿ ನಡೆಯಲಿದೆ.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊರಂಗ್ರಪಾಡಿ ಸ. ವ್ಯ. ಸಂಘದ ಅಧ್ಯಕ್ಷ ಅಲೆವೂರು ಶ್ರೀಧರ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಎಂ. ಜೆ. ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಕರ್ವಾಲು, ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿಯಲ್ಲಿ ಭತ್ತದ ಕೃಷಿ ಕುರಿತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಡಾ.ಧನಂಜಯ, ಸಮಗ್ರ ಕೃಷಿ ಪದ್ಧತಿ ಮತ್ತು ನಿರ್ವಹಣೆ ಕುರಿತು ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಭಟ್, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಸಿಗುವ ಸೌಲ್ಯಗಳ ಕುರಿತು ಉಡುಪಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಸರಕಾರದಿಂದ ಸಿಗುವ ಕೃಷಿ ಸವಲತ್ತುಗಳ ಕುರಿತು ಉಡುಪಿಯ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್ ಮತ್ತು ಗೋ ತಳಿಗಳ ಮಹತ್ವ ಹಾಗು ಹೈನುಗಾರಿಕೆಯಲ್ಲಿ ಸ್ಥಳೀಯ ತಂತ್ರಜ್ಞಾನ ಕುರಿತು ಉಡುಪಿ ಪಶು ವೈದ್ಯಕೀಯ ಇಲಾಖೆಯ ಡಾ.ರಾಜಶೇಖರ ಕಾಸಬಾಗ ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ. ಕೃಷಿ ಸಂಬಂಧಿ ಯಂತ್ರೋಪಕರಣ ಗಳ ಪ್ರದರ್ಶನ ಮಾರಾಟ ಮಳಿಗೆಗಳು ಕೂಡಾ ಇರಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







