ತಂಬಾಕು ಸೇವನೆಯಿಂದ ದುಷ್ಪರಿಣಾಮ: ಡಾ.ಚಂದ್ರಶೇಖರ್ ಅಡಿಗ

ಉಡುಪಿ, ಮೇ 31: ತಂಬಾಕಿನಲ್ಲಿ 300ಕ್ಕೂ ಅಧಿಕ ವಿಷಕಾರಿ ಅಂಶಗಳಿದ್ದು, ತಂಬಾಕು ಸೇವನೆಯಿಂದ ನೇರವಾಗಿ ದೇಹದ ಪ್ರತಿಯೊಂದು ಪ್ರಮುಖ ಅಂಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಉಡುಪಿ ಜಿಲ್ಲಾ ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅಡಿಗ ಹೇಳಿದ್ದಾರೆ.
ಶುಕ್ರವಾರ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ, ಜಿಲ್ಲಾ ಅಸ್ಪತ್ರೆ ಅಜ್ಜರಕಾಡು ಉಡುಪಿ, ಎನ್‌ಟಿಸಿಪಿ ಮತ್ತು ಎನ್‌ಪಿಸಿಡಿಸಿಎಸ್ ವಿಭಾಗ ಜಿಲ್ಲಾಸ್ಪತ್ರೆ ಉಡುಪಿ, ದಂತ ವೈದ್ಯಕೀಯ ವಿಭಾಗ ಜಿಲ್ಲಾಸ್ಪತ್ರೆ ಉಡುಪಿ, ಭಾರತೀಯ ವೈದ್ಯಕೀಯ ಮಂಡಳಿ ಕರಾವಳಿ ಉಡುಪಿ ಜಿಲ್ಲೆ, ಭಾರತೀಯ ದಂತ ವೈದ್ಯಕೀಯ ಮಂಡಳಿ ಉಡುಪಿ ಹಾಗೂ ರೋಟರಿ ಕ್ಲಬ್ ಅಂಬಲಪಾಡಿ ಇವರ ಸಹಯೋಗ ದೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ತಂಬಾಕು ಜಾಗೃತಿ ಜಾಥ ಮತ್ತು ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಬಾಯಿ ಕ್ಯಾನ್ಸರ್‌ನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಶೇ.90 ಗುಣಪಡಿಸ ಬಹುದು. ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಬಾಯಿ ಕ್ಯಾನ್ಸರ್‌ಗೆ ಸರ್ಜರಿ, ರೇಡಿಯೇಶನ್, ಕಿಮೋಥೇರಪಿ ಚಿಕಿತ್ಸೆಗಳಿದ್ದು, ಸರ್ಜರಿ ಮೂಲಕ ಸಂಪೂರ್ಣ ಗುಣಪಡಿಸಬಹುದು ಎಂದರು
ಸರಕಾರವು ತಂಬಾಕು ನಿಷೇಧಕ್ಕೆ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮತ್ತು ಧೂಮಪಾನ ನಿಷೇಧಕ್ಕೆ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ, ತಂಬಾಕು ಸೇವನೆ ಪ್ರಚೋದಿಸುವ ಜಾಹೀರಾತು ನಿಷೇಧಕ್ಕೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಒಂದೊಂದು ಘೋಷ ವಾಕ್ಯದೊಂದಿಗೆ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸುತ್ತದೆ ಎಂದವರು ಹೇಳಿದರು.
ತಂಬಾಕು ಸೇವನೆ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವವರು 15ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಇದು ಬಹಳ ಅಪಾಯಕಾರಿ. ಮೋಜು, ಮಸ್ತಿಗಾಗಿ ಪ್ರಾರಂಭವಾಗಿ ಅದೊಂದು ಚಟವಾಗಿ ಪರಿವರ್ತನೆಯಾಗುತ್ತದೆ. ಇತ್ತೀಚೆಗೆ ತಂಬಾಕು ಸೇವನೆಗೆ ಯುವಜನತೆ ಹೆಚ್ಚಾಗಿ ಬಲಿಯಾಗುತ್ತಿದ್ದು ತಂಬಾಕು ಸುಲಭವಾಗಿ ಸಿಗದಂತೆ ಮಾಡಬೇಕು ಎಂದರು.
ಭಾರತೀಯ ದಂತ ವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮನೋಜ್ ಮ್ಯಾಕ್ಸಿಮ್ ಡಿ.ಲೀಮಾ ಮಾತನಾಡಿ, ಆಶಾ ಕಾರ್ಯಕರ್ತೆ ಯರು ಮನೆ ಮನೆಗೆ ಭೇಟಿ ನೀಡಿ ಬಾಯಿ ಕ್ಯಾನ್ಸರ್ ಕುರಿತು ಅರಿವು ಮೂಡಿ ಸಬೇಕು. ಕ್ಯಾನ್ಸರ್‌ನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇಪ್ರತಿನಿತ್ಯ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.
ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಖಲೀಲ್ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಣಿಪಾಲ ಕಾಲೇಜ್ ಆಪ್ ಡೆಂಟಲ್ ಸೈನ್ಸ್‌ಸ್‌ನ ಸಹಾಯಕ ಪ್ರೊಪೆಸರ್ ಹಾಗೂ ಓರಲ್ ಕ್ಯಾನ್ಸರ್ ವಿಶೇಷಜ್ಞ ಡಾ. ಆದರ್ಶ ಕುಡ್ವ ತಂಬಾಕಿನ ದುಷ್ಪರಿಣಾಮ ಮತ್ತು ಬಾಯಿ ಕ್ಯಾನ್ಸರ್ ಕುರಿತು ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಕುರಿತು ಕಿರು ಬೀದಿ ನಾಟಕ ನಡೆಯಿತು. ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಜಿಲ್ಲಾಸ್ಪತ್ರೆಯವರೆಗೆ ನಡೆದ ಜಾಥಕ್ಕೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್ ಚಾಲನೆ ನೀಡಿದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ(ಪ್ರಬಾರ) ಡಾ.ಸುರೇಶ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯ ಶಶಿಕುಮಾರ್ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕಿ ಕೃತಿ ಸ್ವಾಗತಿಸಿ, ಮನು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










