ಮಹಮ್ಮದ್ ಯಾಸೀರ್ ಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪ್ರದಾನ

ಬಂಟ್ವಾಳ, ಮೇ 31: ಕಲ್ಲಡ್ಕದ ಯುವ ಉದ್ಯಮಿ, ಹಳೆಯ ವಸ್ತು ಸಂಗ್ರಹಾಲಯದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್ ವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ದೂರದರ್ಶನದ ನಿರ್ದೇಶಕ ನಾಡೋಜ ಮಹೇಶ್ ಜೋಶಿ, ಜಸ್ಟೀಸ್ ಹೆಚ್.ಎನ್.ನಾಗಮೋಹನದಾಸ್, ಎಸ್.ಎ.ಚಿನ್ನೇಗೌಡ, ಹೆಚ್.ಎಲ್.ಎನ್.ರಾವ್, ಆರ್ಯಭಟ ಸಂಸ್ಥೆಯ ಭವಾನಿ ಶಂಕರ ಆಚಾರ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ರಾಜ್ಯದ ಕೆಲವೇ ಕೆಲವು ನೋಟು, ನಾಣ್ಯ ಸಹಿತ ಕರೆನ್ಸಿ ಸಂಗ್ರಾಹಕರಲ್ಲಿ ಯಾಸೀರ್ ಒಬ್ಬರಾಗಿ ಗುರುತಿಸಿಕೊಂಡವರು.ಇವರ ಸಂಗ್ರಹದಲ್ಲಿ ದೀವಟಿಗೆಯಿಂದ ಹಿಡಿದು, ಪಾತ್ರೆಪಗಡೆಗಳು ಮಾತ್ರವಲ್ಲದೆ, ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಿಂದ ಹಿಡಿದು ಸ್ಟ್ಯಾಂಪುಗಳು ಸಹಿತ ವೈವಿಧ್ಯತೆಯಿಂದ ಕೂಡಿದೆ. ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳು ಎನಿಂದ ಝಡ್ ವರೆಗೆ, ಹಳೆಯ ದಿನಬಳಕೆಯ ವಸ್ತುಗಳಿಂದ ತೊಡಗಿ ಹೊಸ ವಸ್ತುಗಳವರೆಗಿನ ಯಾಸೀರ್ ಸಂಗ್ರಹ ನೋಡುಗರ ಕಣ್ತುಂಬುವಂತಿದೆ. ಇವರ ಅಪರೂಪದ ವಸ್ತು ಸಂಗ್ರಹ, ನಾಣ್ಯ ಕರೆನ್ಸಿಗಳ ಸಂಗ್ರಹ ಹಲವೆಡೆಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದೀಗ ಆರ್ಯಭಟ ಪ್ರಶಸ್ತಿ ಇವರ ಸಾಧನೆಗೆ ಮತ್ತೊಂದು ಶಹಬ್ಬಾಸ್ ಗಿರಿ ದೊರೆತಂತಾಗಿದೆ.





