ಶಾಸಕ ಭರತ್ ಶೆಟ್ಟಿ ನೀರು ಪೂರೈಕೆ ವಾಹನದ ಬ್ಯಾನರ್ ಕಿತ್ತ ದುಷ್ಕರ್ಮಿ

ಮಂಗಳೂರು, ಮೇ 31: ಶಾಸಕ ಡಾ.ಭರತ್ ಶೆಟ್ಟಿ ಸ್ವಯಂ ಪ್ರೇರಿತವಾಗಿ ನೀರು ಪೂರೈಕೆ ಮಾಡುವ ವಾಹನದಲ್ಲಿದ್ದ ಬ್ಯಾನರ್‌ನ್ನು ವ್ಯಕ್ತಿಯೋರ್ವ ಕಿತ್ತು ಹಾಕಿದ್ದಲ್ಲದೆ, ಅದರ ಚಾಲಕನಿಗೆ ನಿಂದಿಸಿದ ಆರೋಪ ಸುರತ್ಕಲ್ ಠಾಣಾ ವ್ಯಾಪ್ತಿ ಕೇಳಿಬಂದಿದೆ.
ಸ್ಥಳೀಯ ನಿವಾಸಿ ಭರತ್‌ರಾಜ್ ನಿಂದನೆಗೊಳಗಾದ ಚಾಲಕ ಎಂದು ತಿಳಿದುಬಂದಿದೆ.
ಹೋಟೆಲೊಂದರ ಮಾಲಕ ಎನ್ನಲಾದ ಆರೋಪಿಯು ಚಾಲಕನನ್ನುದ್ದೇಶಿಸಿ, ‘ನೀರನ್ನು ಕೊಡುವುದಾದರೆ ಎಲ್ಲೆಡೆಯೂ ಸರಬರಾಜು ಮಾಡಬೇಕು. ಕೆಲವೆಡೆ ನೀರು ಕೊಟ್ಟು, ಇನ್ನುಳಿದೆಡೆ ಕೊಡದಿದ್ದರೆ ನ್ಯಾಯವಲ್ಲ’ ಎಂದು ಹೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಯು ನೀರು ಪೂರೈಕೆ ಮಾಡುವ ವಾಹನದಲ್ಲಿದ್ದ ಬ್ಯಾನರ್‌ನ್ನು ಕಿತ್ತುಹಾಕಿ, ಚಾಲಕನಿಗೆ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸಿಪಿ ಶ್ರೀನಿವಾಸ್‌ಗೌಡ, ಸುರತ್ಕಲ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಠಾಣೆಯಲ್ಲಿ ಈವರೆಗೆ ದೂರು ದಾಖಲಾಗಿಲ್ಲ.

Next Story





