ತಮ್ಮ ಪ್ರಧಾನಿಯನ್ನು ತಪ್ಪಾಗಿ ಗುರುತಿಸಿದ ಭಾರತದ ಚಾನೆಲ್ ಗಳಿಗೆ ಭೂತಾನ್ ಮಾಜಿ ಪ್ರಧಾನಿ ತರಾಟೆ

ಶೆರಿಂಗ್ ಟೋಬ್ಗೆ
ಥಿಂಪು(ಭೂತಾನ),ಮೇ 31: ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಭೂತಾನದ ಹಾಲಿ ಪ್ರಧಾನಿ ಲೋತೆ ಶೆರಿಂಗ್ ಅವರ ಆಗಮನವನ್ನು ವರದಿ ಮಾಡುವಾಗ ಅವರ ತಪ್ಪು ಭಾವಚಿತ್ರಗಳನ್ನು ತೋರಿಸುವ ಮೂಲಕ ತನ್ನ ದೇಶವನ್ನು ಅವಮಾನಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಶೆರಿಂಗ್ ಟೋಬ್ಗೆ ಅವರು ಎರಡು ಭಾರತೀಯ ಸುದ್ದಿವಾಹಿನಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ.
ಒಂದು ಸುದ್ದಿವಾಹಿನಿಯು ಲೋತೆ ಶೆರಿಂಗ್ ಆಗಮನವನ್ನು ಪ್ರಸಾರ ಮಾಡುವಾಗ ಅವರ ಹೆಸರಿನೊಂದಿಗೆ ಭೂತಾನದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಶೆರಿಂಗ್ ವಾಂಗ್ಚುಕ್ ಅವರ ಚಿತ್ರವನ್ನು ಬಳಸಿದ್ದರೆ,ಇನ್ನೊಂದು ವಾಹಿನಿಯು ಟೋಬ್ಗೆ ಅವರ ಚಿತ್ರವನ್ನು ತೋರಿಸಿ ಭೂತಾನದ ಹಾಲಿ ಪ್ರಧಾನಿ ಎಂದು ಬಿಂಬಿಸಿತ್ತು.
ಟ್ವಿಟರ್ನಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿರುವ ಟೋಬ್ಗೆ, ‘‘ಯಾವುದೇ ದೇಶವು ತಮ್ಮ ಪ್ರಧಾನಿಯ ತಪ್ಪು ಚಿತ್ರವನ್ನು ತೋರಿಸಿದರೆ ಭಾರತೀಯ ಮಾಧ್ಯಮಗಳು ಅದರ ವಿರುದ್ಧ ಮುಗಿಬೀಳುತ್ತವೆ. ಆದರೂ ಅವು ನಮ್ಮ ಪ್ರಧಾನಿಯನ್ನು ಗುರುತಿಸುವಾಗ ಸ್ವತಃ ಮುಜುಗರಕ್ಕೊಳಗಾಗುತ್ತವೆ ಮತ್ತು ನಮ್ಮನ್ನು ಅವಮಾನಿಸುತ್ತವೆ. ಭೂತಾನ್ ಪುಟ್ಟದಿರಬಹುದು,ಆದರೆ ಅದು ಭಾರತದ ನಿಕಟ ನೆರೆದೇಶವಾಗಿದೆ ಮತ್ತು ಆಪ್ತಮಿತ್ರನಾಗಿದೆ ’’ ಎಂದು ಹೇಳಿದ್ದಾರೆ. ಶೆರಿಂಗ್ ಅವರನ್ನು ತಪ್ಪಾಗಿ ಗುರುತಿಸಲಾಗಿರುವ ಎರಡು ಸ್ಕ್ರೀನ್ಶಾಟ್ಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಈ ತಪ್ಪಿಗಾಗಿ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಟೋಬ್ಗೆಯವರ ಕ್ಷಮೆಯನ್ನು ಯಾಚಿಸಿದ್ದಾರೆ. ನಂತರ ತಮ್ಮ ಪ್ರಧಾನಿಯ ಚಿತ್ರವನ್ನು ಪೋಸ್ಟ್ ಮಾಡಿರುವ ಟೋಬ್ಗೆ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಭಾರತೀಯರಿಗೆ ತಾನು ಆಭಾರಿ ಎಂದಿರುವರಲ್ಲದೆ,ಭಾರತೀಯ ಮಾಧ್ಯಮಗಳ ಬಳಕೆಗಾಗಿ ಚಿತ್ರವನ್ನು ಲಗತ್ತಿಸಿರುವದಾಗಿ ಟ್ವೀಟಿಸಿದ್ದಾರೆ.







