ಜಾಮೀನಿಗಾಗಿ ಬ್ರಿಟನ್ ಹೈಕೋರ್ಟ್ ಮೆಟ್ಟಿಲನ್ನೇರಿದ ನೀರವ್ ಮೋದಿ
ಲಂಡನ್,ಮೇ 31: ಪಿಎನ್ಬಿಗೆ ಎರಡು ಶತಕೋಟಿ ಡಾಲರ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಶುಕ್ರವಾರ ಜಾಮೀನು ಕೋರಿ ಬ್ರಿಟನ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಗುರುವಾರವಷ್ಟೇ ವಿಚಾರಣಾ ನ್ಯಾಯಾಲಯವು ಆತನ ನ್ಯಾಯಾಂಗ ಬಂಧನದ ಅವಧಿಯನ್ನು ಜೂ.27ರವರೆಗೆ ವಿಸ್ತರಿಸಿತ್ತು.
ಮೋದಿಯ ಜಾಮೀನು ಅರ್ಜಿಯ ವಿಚಾರಣೆಯು ಲಂಡನ್ನಿನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ನಲ್ಲಿ ಜೂ.11ರಂದು ನಡೆಯಲಿದೆ ಎಂದು ಆತನ ಗಡಿಪಾರು ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಬ್ರಿಟನ್ನಿನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸಿಸ್ ತಿಳಿಸಿದೆ.
ಮೋದಿ ಈ ಹಿಂದೆ ಜಾಮೀನು ಕೋರಿ ಇಲ್ಲಿಯ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೂರೂ ಅರ್ಜಿಗಳು ತಿರಸ್ಕೃತಗೊಂಡಿವೆ.
ಮೇ 8ರಂದು ನಡೆದಿದ್ದ ಮೂರನೇ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬಥ್ನಾಟ್ ಅವರು,ಇದು ಬೃಹತ್ ವಂಚನೆ ಪ್ರಕರಣವಾಗಿದೆ. ಮೋದಿಗೆ ಜಾಮೀನು ನೀಡಿದರೆ ಆತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವ ಖಾತರಿಯಿಲ್ಲ. ಜಾಮೀನಿಗೆ ಭದ್ರತಾ ಮೊತ್ತವನ್ನು ಎರಡು ದಶಲಕ್ಷ ಪೌಂಡ್ಗಳಿಗೆ ಹೆಚ್ಚಿಸಿದರೂ ಅದು ಸಾಲದು ಎಂದು ಹೇಳಿದ್ದರು.