ಗಂಗಾ ನದಿ ಮಲಿನಗೊಳಿಸಿದ ಮೂರು ರಾಜ್ಯಗಳಿಗೆ ತಲಾ 25 ಲಕ್ಷ ರೂ. ದಂಡ

ಹೊಸದಿಲ್ಲಿ, ಮೇ.31: ಗಂಗಾ ನದಿಗೆ ಹಾನಿಯುಂಟು ಮಾಡುವುದನ್ನು ಮುಂದುವರಿಸಿರುವ ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಒಂದು ತಿಂಗಳ ಒಳಗಾಗಿ ತಲಾ 25 ಲಕ್ಷ ರೂ. ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಶುಕ್ರವಾರ ಸೂಚಿಸಿದೆ.
ಬಿಹಾರ ವಾಸ್ತವದಲ್ಲಿ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ. ಇಲ್ಲಿ ಒಂದೇ ಒಂದು ಚರಂಡಿ ಯೋಜನೆಯೂ ಸಂಪೂರ್ಣಗೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ 22 ಚರಂಡಿ ಯೋಜನೆಗಳ ಪೈಕಿ ಕೇವಲ ಮೂರು ಸಂಪೂರ್ಣಗೊಂಡಿದೆ ಮತ್ತು ಜಾರ್ಖಂಡ್ ಕೂಡಾ ಗಂಗಾ ನದಿಯ ನೈರ್ಮಲ್ಯಕ್ಕೆ ಹೆಚ್ಚಿನ ಕಾಣಿಕೆ ನೀಡಿಲ್ಲ ಎಂದು ನ್ಯಾಯಾಧೀಕರಣ ತಿಳಿಸಿದೆ.
ಒಂದು ಗಂಭೀರ ವಿಷಯದ ಬಗ್ಗೆ ರಾಜ್ಯಗಳು ಈ ರೀತಿ ಸಂವೇದನಾರಹಿತ ನಿಲುವು ಪ್ರದರ್ಶಿಸುತ್ತಿರುವುದು ಆತಂಕದ ವಿಷಯವಾಗಿದೆ. ಈ ರಾಜ್ಯಗಳು ಪಾವತಿಸುವ ದಂಡವನ್ನು ಗಂಗಾನದಿಯ ಪರಿಸರದ ರಕ್ಷಣೆಗೆ ಬಳಸಲಾಗುವುದು ಎಂದು ನ್ಯಾಯಾಧೀಕರಣ ತಿಳಿಸಿದೆ. ನದಿಗೆ ವಿಷಕಾರಿ ಕೊಳಚೆ ನೀರನ್ನು ಹರಿಯಬಿಡುವುದು ಅಪರಾಧವಾಗಿದ್ದು ಮಲಿನತೆಗೆ ಕಾರಣವಾಗುವ ಕೈಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಎನ್‌ಜಿಟಿ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ. ಗಂಗಾನದಿಯಲ್ಲಿ ಒಂದು ಹನಿ ಮಾಲಿನ್ಯವೂ ಆತಂಕದ ವಿಷಯವಾಗಿದೆ. ಹಾಗಾಗಿ ಎಲ್ಲ ರಾಜ್ಯಗಳು ನದಿಯನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು ಎಂದು ಎನ್‌ಜಿಟಿ ಈ ಹಿಂದೆ ತಿಳಿಸಿತ್ತು.







