ವಿಟಿಯು ಕುಲಸಚಿವ ಜಗನ್ನಾಥ್‌ರೆಡ್ಡಿ ಅಮಾನತು ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವು

ಬೆಂಗಳೂರು, ಮೇ 31: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಜಗನ್ನಾಥ್‌ರೆಡ್ಡಿ ಅವರ ಅಮಾನತು ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿ ಆದೇಶಿಸಿದೆ.
ಇಲಾಖಾ ವಿಚಾರಣೆಗಾಗಿ ಡಾ.ಜಗನ್ನಾಥ್‌ರೆಡ್ಡಿ ಅವರ ಅಮಾನತು ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಕೋರಿ ವಿಟಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರೆಡ್ಡಿ ಅವರ ಅಮಾನತು ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿತು.
ಜಗನ್ನಾಥ್‌ರೆಡ್ಡಿ ವಿರುದ್ಧ ಗುತ್ತಿಗೆ ಕಾಮಗಾರಿ ಆರೋಪ ಬರುತ್ತಿದ್ದಂತೆಯೇ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ರೆಡ್ಡಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರೆಡ್ಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಏಕಸದಸ್ಯ ನ್ಯಾಯಪೀಠವು ರೆಡ್ಡಿ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶಕ್ಕೆ ತಡೆ ನೀಡಿತ್ತು.
ಇದನ್ನು ಪ್ರಶ್ನಿಸಿ ವಿಟಿಯುನವರು ವಿಭಾಗೀಯ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ, ಶುಕ್ರವಾರ ವಿಭಾಗೀಯ ನ್ಯಾಯಪೀಠವು ಅಮಾತನು ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದೆ.
ಆರೋಪವೇನು: ಗುತ್ತಿಗೆ ಗಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದು ಆರೋಪ. ಇದು ಸುಮಾರು 200 ಕೋಟಿ ಹಗರಣವಾಗಿದೆ. ಇಬ್ಬರು ವಿದ್ಯಾರ್ಥಿಗಳ ಪಾಲಕರಾದ ಡಾ.ವಿಶ್ವನಾಥ ಹಾಗೂ ಡಾ.ವಾಸುದೇವಮೂರ್ತಿ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಪಾಲರಿಗೆ ಈ ಕುರಿತು ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಸೂಚನೆ ನೀಡಿದ್ದರು. ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ಶಿಂಧೆ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು.







