ಲಂಕಾ ವಿರುದ್ಧ ಇಂದು ನ್ಯೂಝಿಲ್ಯಾಂಡ್ ಅಭಿಯಾನ ಆರಂಭ

ಲಂಡನ್, ಮೇ 31: ಶ್ರೀಲಂಕಾವನ್ನು ಶನಿವಾರ ಕಾರ್ಡಿಫ್‌ನಲ್ಲಿ ಎದುರಿಸಲಿರುವ ನ್ಯೂಝಿಲ್ಯಾಂಡ್ ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ವಿಶ್ವಕಪ್‌ನಲ್ಲಿ ಆರು ಬಾರಿ ಸೆಮಿ ಫೈನಲ್‌ನಲ್ಲಿ ಸೋತಿದ್ದ ಕಿವೀಸ್ 2015ರಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿತ್ತು. ಆದರೆ, ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ಚೊಚ್ಚಲ ಪ್ರಶಸ್ತಿಯಿಂದ ವಂಚಿತವಾಗಿತ್ತು.
ಕಳೆದ ವಿಶ್ವಕಪ್ ಬಳಿಕ ಬ್ರೆಂಡನ್ ಮಕೆಲಮ್ ಬದಲಿಗೆ ಕೇನ್ ವಿಲಿಯಮ್ಸನ್ ಕಿವೀಸ್ ನಾಯಕತ್ವವಹಿಸಿಕೊಂಡಿದ್ದಾರೆ. 2015ರ ವಿಶ್ವಕಪ್‌ನಲ್ಲಿ 2ನೇ ಸ್ಥಾನ ಪಡೆದಿದ್ದ ಕಿವೀಸ್ ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದೆ. ಆದರೆ, ತವರು ನೆಲದಲ್ಲಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಹಾಗೂ ಭಾರತ ತಂಡಕ್ಕೆ ಸೋಲುಂಡಿದೆ. ನ್ಯೂಝಿಲ್ಯಾಂಡ್ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ವಿಶ್ವಕಪ್ ಫೇವರಿಟ್ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿ ಗಮನ ಸೆಳೆದಿತ್ತು. ಆದರೆ, 2ನೇ ಪಂದ್ಯದಲ್ಲಿ ವಿಂಡೀಸ್‌ಗೆ 91 ರನ್‌ಗಳಿಂದ ಶರಣಾಗಿತ್ತು. ಇತ್ತೀಚೆಗೆ ರಾಸ್ ಟೇಲರ್ ಉತ್ತಮ ಫಾರ್ಮ್‌ನಲ್ಲಿದ್ದು 2017ರಲ್ಲ್ಲಿ 60ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವಿಲಿಯಮ್ಸನ್(12ನೇ ರ್ಯಾಂಕ್) ಹಾಗೂ ಮಾರ್ಟಿನ್ ಗಪ್ಟಿಲ್(10ನೇ)ನ್ಯೂಝಿಲ್ಯಾಂಡ್ ಬ್ಯಾಟಿಂಗ್‌ನ ಅಪಾಯಕಾರಿ ಆಟಗಾರರಾಗಿದ್ದಾರೆ.
ಟ್ರೆಂಟ್ ಬೌಲ್ಟ್ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದು, ಕಾಲಿನ್ ಡಿ ಗ್ರಾಂಡ್‌ಹೋಮ್ ಹಾಗೂ ಟಿಮ್ ಸೌಥಿ ಸಾಥ್ ನೀಡಲಿದ್ದಾರೆ. ಸ್ಪಿನ್ನರ್‌ಗಳಾದ ಐಶ್ ಸೋಧಿ ಹಾಗೂ ಮೈಕಲ್ ಸ್ಯಾಂಟ್ನರ್ ಉಪಯುಕ್ತ ಕಾಣಿಕೆ ನೀಡಲಿದ್ದಾರೆ.
ಕಿವೀಸ್ ಫೇವರಿಟ್: 1996ರ ಚಾಂಪಿಯನ್ ಶ್ರೀಲಂಕಾದ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಕಿವೀಸ್ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಕಳಪೆ ಫಾರ್ಮ್‌ನಲ್ಲಿರುವ ಶ್ರೀಲಂಕಾ ಏಕದಿನ ರ್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಲಂಕಾ ಕಳೆದ 9 ಏಕದಿನ ಪಂದ್ಯಗಳಲ್ಲಿ 8ರಲ್ಲಿ ಸೋತಿದೆ. ವಿಶ್ವಕಪ್‌ನ 2 ಅಭ್ಯಾಸ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ ಸೋತಿದೆ. ನೂತನ ನಾಯಕ ಡಿಮುತ್ ಕರುಣರತ್ನೆ 4 ವರ್ಷಗಳ ಬಳಿಕ ಏಕದಿನ ತಂಡಕ್ಕೆ ವಾಪಸಾಗಿದ್ದು, ಸೋಲಿನ ಕೂಪದಲ್ಲಿರುವ ತಂಡವನ್ನು ಮೇಲಕ್ಕೇತ್ತುವ ಮಹತ್ತರ ಹೊಣೆ ಅವರ ಮೇಲಿದೆ. ಶ್ರೀಲಂಕಾ ವಿಶ್ವಕಪ್‌ನಲ್ಲಿ ಪ್ರಭಾವಿ ದಾಖಲೆ ಹೊಂದಿದೆ. 1 ಬಾರಿ ಚಾಂಪಿಯನ್, 2 ಬಾರಿ ರನ್ನರ್ಸ್ ಅಪ್ ಹಾಗೂ ಒಂದು ಬಾರಿ ಸೆಮಿ ಫೈನಲ್‌ಗೆ ತಲುಪಿದೆ. ನ್ಯೂಝಿಲ್ಯಾಂಡ್-ಶ್ರೀಲಂಕಾ 1979ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು.







