ಚಾಂಪಿಯನ್ ಆಸ್ಟ್ರೇಲಿಯಕ್ಕೆ ಅಫ್ಘಾನಿಸ್ತಾನ ಎದುರಾಳಿ

ಬ್ರಿಸ್ಟಾಲ್, ಮೇ 31: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಶನಿವಾರ 12ನೇ ಆವೃತ್ತಿಯ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಐಸಿಸಿ ಏಕದಿನ ರ್ಯಾಂಕಿನ ಅಗ್ರ-3 ಆಲ್‌ರೌಂಡರ್‌ಗಳಲ್ಲಿ ಇಬ್ಬರು ಅಫ್ಘಾನಿಸ್ತಾನ ಆಟಗಾರರಿದ್ದಾರೆ. ಅವರುಗಳೆಂದರೆ ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ. ಅಫ್ಘಾನ್ ತಂಡ ಸ್ಪಿನ್ ವಿಭಾಗ ಬಲಿಷ್ಠವಾಗಿದ್ದು, ರಶೀದ್ ಏಕದಿನ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಸ್ವಿಂಗ್ ಬೌಲರ್‌ಗಳ ಸ್ನೇಹಿ ವಾತಾವರಣಕ್ಕೆ ಅಫ್ಘಾನ್ ಬೇಗನೆ ಹೊಂದಿಕೊಳ್ಳಬಹುದು. ವಿಶ್ವಕಪ್‌ನ 9ನೇಹಾಗೂ 10ನೇ ಸ್ಥಾನಕ್ಕಾಗಿ ನಡೆದ ಅರ್ಹತಾ ಸರಣಿಯಲ್ಲಿ ವಿಂಡೀಸ್ ವಿರುದ್ಧ ಜಯ ಸಾಧಿಸಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡಿದೆ. ಅಫ್ಘಾನ್‌ನ ಬ್ಯಾಟಿಂಗ್ ಸರದಿಯಲ್ಲಿ ಅನುಭವದ ಕೊರತೆಯಿದೆ. ಅಸ್ಘರ್ ಅಫ್ಘಾನ್ ಬದಲಿಗೆ ವಿಶ್ವಕಪ್‌ನಲ್ಲಿ ನಾಯಕತ್ವದ ಜವಾಬ್ದಾರಿ ಪಡೆದಿರುವ ಗುಲ್ಬದಿನ್ ನೈಬ್ ಅಚ್ಚರಿ ಆಯ್ಕೆಯಾಗಿದ್ದಾರೆ. ಅಫ್ಘಾನಿಸ್ತಾನ 4 ವರ್ಷಗಳ ಹಿಂದೆ ಡುನೆಡಿನ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು.ಇದು ವಿಶ್ವಕಪ್‌ನಲ್ಲಿ ಅಫ್ಘಾನ್‌ನ ಏಕೈಕ ಗೆಲುವಾಗಿದೆ. ಈ ಬಾರಿಯ ಟೂರ್ನಮೆಂಟ್‌ನಲ್ಲಿ ಯಾವುದೇ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು ಭಾಗವಹಿಸುತ್ತಿಲ್ಲ. ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ಪೈಕಿ ಅಫ್ಘಾನ್ ಕೆಳರ್ಯಾಂಕಿನ ತಂಡವಾಗಿದೆ.
2015ರಲ್ಲಿ ತವರು ನೆಲದಲ್ಲಿ ನಡೆದ ವಿಶ್ವಕಪ್‌ನಲ್ಲಿ ಟ್ರೋಫಿ ಎತ್ತಿಹಿಡಿದಿದ್ದ ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಜಯ ಸಾಧಿಸಿ ಟೂರ್ನಿಗೆ ಆತ್ಮವಿಶ್ವಾಸದೊಂದಿಗೆ ಬಂದಿದೆ. ಭಾರತ ವಿರುದ್ಧ 3-2 ಅಂತರದಿಂದ ಸರಣಿ ಜಯಿಸಿದ್ದ ಆಸೀಸ್ ತಂಡ ಪಾಕ್ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿತ್ತು. ಆಸೀಸ್ ಬ್ಯಾಟಿಂಗ್ ಸರದಿಯಲ್ಲಿ ಫಿಂಚ್ ಹಾಗೂ ಉಸ್ಮಾನ್ ಖ್ವಾಜಾರಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ 12 ತಿಂಗಳ ನಿಷೇಧವನ್ನು ಪೂರೈಸಿ ತಂಡಕ್ಕೆ ವಾಪಸಾಗಿದ್ದು ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಗಾಯದಿಂದ ಚೇತರಿಸಿಕೊಂಡು ಮರಳಿದ್ದು ಬೌಲಿಂಗ್ ವಿಭಾಗವನ್ನು ಶಕ್ತಿಶಾಲಿಯಾಗಿಸಿದೆ. ಆಸೀಸ್ ತಂಡದಲ್ಲಿ ಆಡಮ್ ಝಾಂಪ ಹಾಗೂ ನಥಾನ್ ಲಿಯೊನ್‌ರಂತಹ ಸ್ಪಿನ್ನರ್‌ಗಳಿದ್ದಾರೆ.







