ಕಳೆದ 15 ತ್ರೈಮಾಸಿಕಗಳಲ್ಲೇ ಕನಿಷ್ಠ ಪ್ರಮಾಣಕ್ಕೆ ಕುಸಿದ ದೇಶದ ಜಿಡಿಪಿ ಪ್ರಗತಿ ದರ

ಹೊಸದಿಲ್ಲಿ, ಜೂ.1: ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಪ್ರಗತಿದರ ಶೇಕಡ 6ಕ್ಕಿಂತಲೂ ಕಡಿಮೆಯಾಗಿದ್ದು, ಹದಿನೆಂಟು ತ್ರೈಮಾಸಿಕಗಳಲ್ಲೇ ಕನಿಷ್ಠ ಪ್ರಮಾಣ ಇದಾಗಿದೆ. ಕಾರು ಹಾಗೂ ಗ್ರಾಹಕ ವಸ್ತುಗಳಿಗೆ ಬೇಡಿಕೆ ಕುಸಿದಿರುವುದು ಇದಕ್ಕೆ ಮುಖ್ಯ ಕಾರಣ. ಜತೆಗೆ ಕೃಷಿ ಉತ್ಪಾದನೆ ಕೂಡಾ ಕುಸಿದಿದ್ದು, ಹೊಸ ಸರ್ಕಾರಕ್ಕೆ ಆರಂಭದಲ್ಲೇ ಆರ್ಥಿಕ ಪ್ರಗತಿಯ ಹೊಸ ಸವಾಲು ಎದುರಾಗಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಗತಿ ಅಭಿವೃದ್ಧಿ ಕುಂಠಿತವಾಗಿರುವುದರಿಂದ ವಾರ್ಷಿಕ ಪ್ರಗತಿ ದರ 6.8%ಕ್ಕೆ ಇಳಿದಿದೆ. ಇದು ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಶುಕ್ರವಾರ ಪ್ರಕಟಿಸಿದೆ.
2019ರ ಜನವರಿ- ಮಾರ್ಚ್ ಅವಧಿಯಲ್ಲಿ 5.8% ಪ್ರಗತಿ ದಾಖಲಾಗಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ, ಭಾರತದ ಪ್ರಗತಿಯನ್ನು ಹಿಂದಿಕ್ಕಿದೆ.
ಇದರಿಂದಾಗಿ ಮುಂದಿನವಾರ ಸಭೆ ಸೇರಲಿರುವ ವಿತ್ತೀಯ ನೀತಿ ಸಮಿತಿ ಮತ್ತೆ ಬಡ್ಡಿದರ ಇಳಿಕೆಗೆ ಮುಂದಾಗುವ ಸಾಧ್ಯತೆ ಇದೆ. ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇಕಡ 3ಕ್ಕಿಂತ ಕಡಿಮೆ ಇದೆ. ಈಗಾಗಲೇ ಸರ್ಕಾರದಿಂದ ಹಣಕಾಸು ಉತ್ತೇಜನಕ್ಕೆ ಬೇಡಿಕೆ ವ್ಯಾಪಕವಾಗಿದ್ದು, ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಗೆ ಇದು ಮತ್ತಷ್ಟು ಹೊರೆಯಾಗಲಿದೆ.
ಆದರೆ ಪ್ರಗತಿ ಕುಂಠಿತವಾಗಿರುವುದು ತಾತ್ಕಾಲಿಕ ಅಂಶಗಳ ಕಾರಣದಿಂದ. ಆದ್ದರಿಂದ ಮುಂದಿನ ತ್ರೈಮಾಸಿಕಗಳಲ್ಲಿ ಪ್ರಗತಿ ದರ ಪುನಶ್ಚೇತನಗೊಳ್ಳಲಿದೆ ಎಂಬ ಆಶಯವನ್ನು ಹಣಕಾಸು ಕಾರ್ಯದರ್ಶಿ ಸುಭಾಶ್ಚಂದ್ರ ಗಾರ್ಗ್ ಹೇಳಿದ್ದಾರೆ. ಈಗಾಗಲೇ ಹಲವು ಸರಕುಗಳ ಮೇಲೆ ತೆರಿಗೆ ಇಳಿಸಬೇಕು ಎಂಬ ಬೇಡಿಕೆ ಇರುವುದರಿಂದ, ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಸವಾಲು ಎದುರಾಗಿದೆ.