ಕಿರಿಯ ಆರೋಗ್ಯ ಸಹಾಯಕಿಯರ ವೇತನ ಬಾಕಿ: ಶಾಸಕರಿಗೆ ಮನವಿ
ಬಂಟ್ವಾಳ, ಜೂ. 1: ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗದಿರುವ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಲ್ಲಿ ತಿಳಿಸಿದ್ದು, ನಿಗದಿತ ಸಮಯದಲ್ಲಿ ವೇತನ ಪಾವತಿಯಾಗಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರು ಶಾಸಕರಲ್ಲಿ ಈ ಬಗ್ಗೆ ಲಿಖಿತವಾಗಿ ವಿನಂತಿಸಿದ್ದು, ಕಳೆದ ಮೂರು ತಿಂಗಳಿಂದ ಸಂಬಳ ಪಾವತಿಯಾಗಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಸರಕಾರದಿಂದ ಕಿರಿಯ ಆರೋಗ್ಯ ಸಹಾಯಕಿಯರಿಗೆ ತಿಂಗಳ ಸಂಬಳದ ಅನುಧಾನ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ನೀಡಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ಇತರ ನೌಕರರಿಗೆ, ಅಧಿಕಾರಿಗಳಿಗೆ ವೇತನ ಪಾವತಿಯಾಗಿದ್ದು, ಕೇವಲ ಕಿರಿಯ ಆರೋಗ್ಯ ಸಹಾಯಕಿಯರಿಗೆ ವೇತನ ಪಾವತಿಯಾಗದೆ ಬಾಕಿ ಇರಿಸಿರುವುದು ಖೇದಕರವಾಗಿದೆ ಎಂದು ಅವರು ವಿವರಿಸಿದ್ದಾರೆ.
ಗೃಹ ಸಾಲ ಮೊದಲಾದ ಸಾಲಗಳ ಕಂತು ಪಾವತಿಸಲು, ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು, ದೈನಂದಿನ ಮನೆ ಖರ್ಚುಗಳಿಗೆ ತಿಂಗಳ ವೇತನವನ್ನೇ ಅವಲಂಬಿಸಿದ್ದು, ಮೂರುತಿಂಗಳಿಂದ ತಿಂಗಳ ವೇತನ ಪಾವತಿಯಾಗದೇ ಇರುವುದರಿಂದ ತುಂಬಾ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದೇವೆ. ತಿಂಗಳ ಬ್ಯಾಂಕ್ ಸಾಲದ ಕಂತು ಕಟ್ಟದೇ ದಂಡನಾ ಬಡ್ಡಿ ಕಟ್ಟುವ ಪರಿಸ್ಥಿತಿ ಮತ್ತು ದೈನಂದಿನ ಖರ್ಚಿಗೆ ಕೈಸಾಲ ಪಡೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ವೇತನ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.







