ಕೆಲ ‘ಶಕ್ತಿ’ಗಳಿಂದ ಯಕ್ಷಗಾನ ಪಠ್ಯಪುಸ್ತಕ ಮುದ್ರಣಕ್ಕೆ ತಡೆ ಯತ್ನ
ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಆರೋಪ

ಉಡುಪಿ, ಜೂ.1: ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನವನ್ನು ಕ್ರಮಬದ್ಧವಾಗಿ ಕಲಿಸುವುದಕ್ಕಾಗಿ ಪಠ್ಯಪುಸ್ತಕವನ್ನು ಶೀಘ್ರವಾಗಿ ಮುದ್ರಣ ಮಾಡಲು ಎಲ್ಲಾ ಪ್ರಯತ್ನಗಳನ್ನು ನಡೆಸುತಿದ್ದರೂ, ಕೆಲವು ‘ಶಕ್ತಿ’ಗಳು ಪುಸ್ತಕ ಮುದ್ರಣಗೊಳ್ಳದಂತೆ ಎಲ್ಲಾ ಅಡೆತಡೆಗಳನ್ನು ಒಡ್ಡುವುದಲ್ಲದೇ, ಸರಕಾರದ ಮೇಲೆ ಒತ್ತಡವನ್ನೂ ಹೇರುತ್ತಿವೆ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ. ಎ.ಹೆಗಡೆ ಗಂಭೀರ ಆರೋಪ ಮಾಡಿದ್ದಾರೆ.
ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ.ಆಚಾರ್ಯ ದತ್ತಿ-ಯಕ್ಷನಿಧಿ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಕರಾವಳಿಯ ಯಕ್ಷಗಾನ ಕಲಾವಿದರ 21ನೇ ಸಮಾವೇಶದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಯಕ್ಷಗಾನಕ್ಕೆ ಸಂಬಂಧಿಸಿದ ಪಠ್ಯಪುಸ್ತಕವನ್ನು ಅಕಾಡೆಮಿ ನೇರವಾಗಿ ಮುದ್ರಣ ಮಾಡುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದಿದೆ. ಅದು ಪುಸ್ತಕ ಶೀಘ್ರವಾಗಿ ಮುದ್ರಣಗೊಳ್ಳಲು ಪ್ರಯತ್ನಿಸುತ್ತಿದೆ. ಮುದ್ರಣಕ್ಕೆ ಈಗಾಗಲೇ ಆದೇಶವೂ ಹೊರಬಿದ್ದಿದೆ. ಆದರೆ ಈ ನಡುವೆ ಕೆಲವರು ಪುಸ್ತಕ ಮುದ್ರಣ ಗೊಳ್ಳದಂತೆ ತಡೆಯಲು ಭಾರೀ ಪ್ರಯತ್ನ ನಡೆಸುತಿದ್ದಾರೆ. ಈ ಬಗ್ಗೆ ನನ್ನ ವಿರುದ್ಧ ದೂರುಗಳನ್ನು ಮುಖ್ಯಮಂತ್ರಿಯವರೆಗೂ ಒಯ್ದಿದ್ದಾರೆ ಎಂದರು.
ಆಸಕ್ತ ಕಲಾವಿದರಿಗೆ ಯಕ್ಷಗಾನ ಜೂನಿಯರ್, ಯಕ್ಷಗಾನ ಸೀನಿಯರ್ ಪದವಿಗಳನ್ನು ಪಡೆಯಲು ಪಠ್ಯಪುಸ್ತಕಗಳಿಂದ ಸಾಧ್ಯವಾಗಲಿದೆ. ಆದರೆ ಈಗ ಈ ಪಠ್ಯಗಳ ಮುದ್ರಣಕ್ಕೆ ಕೆಲವರು ಅಡ್ಡಗಾಲು ಹಾಕುತಿದ್ದು, ಅಧ್ಯಕ್ಷರನ್ನೇ ಕಿತ್ತು ಹಾಕಲು ಪ್ರಯತ್ನಿಸುತಿದ್ದಾರೆ ಎಂದು ಪ್ರೊ.ಹೆಗಡೆ ದೂರಿದರು.
ಅಕಾಡೆಮಿ ಯಕ್ಷಗಾನಕ್ಕೆ ಸಂಬಂಧಿಸಿದ ಕಲೆಗಳ ಕುರಿತಂತೆ ಸಮಗ್ರವಾಗಿ ಚಿಂತನೆ ನಡೆಸಿದರೆ, ಯಕ್ಷಗಾನ ಕಲಾರಂಗದಂಥ ಸಂಸ್ಥೆ ಕಲಾವಿದರ ಹಿತಚಿಂತನೆಯನ್ನೇ ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುತಿದೆ. ಕಲಾವಿದರಿ ಲ್ಲದೇ ಒಂದು ಕಲೆ ಉಳಿಯಲಾರದು. ಆದುದರಿಂದ ಅಧ್ಯಕ್ಷನಾಗಿ ಸಂಸ್ಥೆಗೆ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ನನಗೆ ಸರಕಾರದಿಂದ ಸಿಗುವ ಒಂದು ತಿಂಗಳ ಗೌರವಧನ 25,000ರೂ.ಗಳನ್ನು ಯಕ್ಷಗಾನ ಕಲಾರಂಗಕ್ಕೆ ನೀಡುವುದಾಗಿ ಅವರು ಘೋಷಿಸಿದರು.
ಅಕಾಡೆಮಿ ತನ್ನ ಮಿತಿಯೊಳಗೆ ಕಲಾವಿದರ ಏಳಿಗೆಗಾಗಿ ಪ್ರಯತ್ನಿಸುತಿದೆ. ಕಳೆದ ವರ್ಷ ಕಲಾವಿದರಿಗೆ ತರಬೇತಿಯನ್ನು ಏರ್ಪಡಿಸಿತ್ತು. ಯಕ್ಷಗಾನ ಕಲಾವಿದರಿಗೆ ಸರಕಾರದಿಂದ ಮಾಸಾಶನ ಸಿಗುವಂತೆ ಪ್ರಯತ್ನ ನಡೆಸಿದ್ದು, ಈಗಾಗಲೇ ಮಾಸಾಶನಕ್ಕೆ ಶಿಫಾರಸ್ಸು ಮಾಡಿ, ಅದು ಸಿಗುವಂತೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ನಡೆಸಿದೆ ಎಂದು ಅವರು ಹೇಳಿದರು.
ಸಂಸ್ಕೃತಿ ವಿರೋಧಿ ಸರಕಾರ: ಯಕ್ಷಗಾನವನ್ನು ರಾಜ್ಯದ ಹಾಗೂ ರಾಷ್ಟ್ರದ ಪ್ರಾತಿನಿಧಿಕ ಕಲೆಯನ್ನಾಗಿ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಆದರೆ ಇದನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ಮಾಡಬೇಕಾಗಿದೆ. ನಾನು ಕಂಡಂತೆ ಈಗಿನ ಸರಕಾರಗಳು ಸಂಸ್ಕೃತಿ ವಿರೋಧಿಯಾಗಿವೆ ಎಂದರು.
ರಾಜ್ಯದಲ್ಲಿ ಈಗಿರುವ ಸಮ್ಮಿಶ್ರ ಸರಕಾರ ಸಂಸ್ಕೃತಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ಅನುದಾನ ವನ್ನು ಅದು ರೈತರ ಸಾಲಮನ್ನಾಕ್ಕಾಗಿ ಕಡಿತಗೊಳಿಸಿದೆ. ಇದರಿಂದ ಯಕ್ಷಗಾನ ಅಕಾಡೆಮಿಗೆ 1.10 ಕೋಟಿ ರೂ.ಬದಲು ಕೇವಲ 80 ಲಕ್ಷ ರೂ.ಅನುದಾನ ಸಿಗುತ್ತಿದೆ. ಇದರಲ್ಲಿ 40ಲಕ್ಷ ರೂ. ಸಿಬ್ಬಂದಿಗಳ ಸಂಬಳ ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ ಬೇಕಾಗಿದೆ. ಉಳಿದ 40ಲಕ್ಷ ರೂ.ಗಳಲ್ಲಿ ನಾವು ಇಡೀ ರಾಜ್ಯದಲ್ಲಿ ಯಕ್ಷಗಾನದ ವಿವಿಧ ಪ್ರಕಾರಗಳ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಈಗ ಕಲಾವಿದರು ಎಲ್ಲಕ್ಕೂ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಸಂಘಸಂಸ್ಥೆಗಳಿಗೆ ಹಣಕಾಸಿನ ನೆರವಿಗೆ ಶಿಫಾರಸ್ಸು ಮಾಡಿ ಸರಕಾರಕ್ಕೆ ಕಳುಹಿಸಿದ್ದರೂ ಅದನ್ನು ಕಡೆಗಣಿಸಿದೆ. ಕಲಾವಿದರಿಗೆ ನೀಡುವ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಯಕ್ಷಗಾನಕ್ಕೆ ಅಳಿವಿಲ್ಲ: ಯಕ್ಷಗಾನ ಕಲೆ ಉಳಿಯುವುದಿಲ್ಲ ಎಂಬ ಭಯ ಯಾರಿಗೂ ಬೇಡ. ಏಕೆಂದರೆ ಇದು ಕರಾವಳಿ ಜನರ ರಕ್ತದ ಕಣಕಣ ದಲ್ಲೂ ಇದೆ.ಹೀಗಾಗಿ ಯಕ್ಷಗಾನಕ್ಕೆ ಅಳಿವಿಲ್ಲ. ಆದರೆ ಯಾವ ರೂಪದಲ್ಲಿ ಉಳಿಯುತ್ತದೆ ಎಂಬುದನ್ನು ಮಾತ್ರ ಕಾಲವೇ ನಿರ್ಣಯಿಸುತ್ತದೆ ಎಂದು ಪ್ರೊ.ಹೆಗಡೆ ತಿಳಿಸಿದರು.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಒಂದು ಕಾಲದಲ್ಲಿ ಗಂಡು ಕಲೆ ಎನಿಸಿದ ಯಕ್ಷಗಾನಕ್ಕೆ ಇಂದು ಮತ, ಲಿಂಗ ಬೇಧವಿಲ್ಲ. ಇವುಗಳೆಲ್ಲವನ್ನೂ ಅದು ಮೀರಿ ನಿಂತಿದೆ. ಇಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಕಲಾವಿದರೂ ನೃತ್ಯ ಹಾಗೂ ಮಾತುಗಾರಿಕೆ ಯಲ್ಲಿ ಅದ್ಭುತ ಪ್ರದರ್ಶನ ನೀಡುತಿದ್ದಾರೆ.ಯಕ್ಷಗಾನ ಒಂದು ಪರಿಪೂರ್ಣವಾದ ಕಲೆ ಎಂದರು.
ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಪ್ರೊ.ಪ್ರಭಾಕರ ಜೋಶಿ, ಡಾ.ಪ್ರಭಾಕರ ಶಿಶಿಲ, ಉದ್ಯಮಿಗಳಾದ ಆನಂದ ಸಿ.ಕುಂದರ್, ವಿಶ್ವನಾಥ ಶೆಣೈ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ಗಂಗಾಧರ ರಾವ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಸ್ವಾಗತಿಸಿದರೆ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಈ ವರ್ಷ ನಿಧನರಾದ 12 ಮಂದಿ ಯಕ್ಷಗಾನ ಕಲಾವಿದರ ಕುಟುಂಬಗಳಿಗೆ ಮೂರು ಲಕ್ಷ ರೂ.ಸಹಾಯಧನವನ್ನು ವಿತರಿಸ ಲಾಯಿತು. ಅಲ್ಲದೇ ಬೆಳಗ್ಗೆ ಯಕ್ಷನಿಧಿ ಕಲಾವಿದರ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.









