ಕತ್ತಿಯಿಂದ ಕಡಿದು ಕೊಲೆಗೆ ಯತ್ನ:ಆರೋಪಿ ಬಂಧನ

ವಿನೋದ್
ಪುತ್ತೂರು : ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಪುತ್ತೂರು ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ವಿನೋದ್ ಹಲ್ಲೆ ನಡೆಸಿದ ಆರೋಪಿ. ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಮಹಾಬಲ ರೈ ಅವರ ಪುತ್ರ ಶರತ್ ರೈ (30) ಹಲ್ಲೆಗೊಳಗಾದವರು. ಗಂಭೀರ ಗಾಯಗಳಾಗಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿದೆ.
ಆರೋಪಿ ವಿನೋದ್ ನಗರದ ಕೊಂಬೆಟ್ಟು ದ್ವಾರದ ಬಳಿ ಶರತ್ ಅವರನ್ನು ತಡೆದು ನಿಲ್ಲಿಸಿ ಅವರ ಎಡಗೈ ಮತ್ತು ಬೆನ್ನಿನ ಭಾಗಕ್ಕೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿನೋದ್ನನ್ನು ಬಂದಿಸಿದ್ದಾರೆ.
ಹಲ್ಲೆಗೊಳಗಾದ ಶರತ್ ರೈ ಮತ್ತು ಆರೋಪಿ ವಿನೋದ್ ನಡುವೆ 7 ವರ್ಷದ ಹಿಂದೆ ಗಲಾಟೆ ನಡೆದಿತ್ತು. ಇದೇ ದ್ವೇಷದಲ್ಲಿ ಆರೋಪಿ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ವಿಚಾರಣೆಯ ವೇಳೆ ತಿಳಿದು ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







