ಮಾತೃಭಾಷೆಯ ಉಳಿವಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ- ಸಂಜೀವ ಮಠಂದೂರು
ಕಸಾಪದಿಂದ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ

ಪುತ್ತೂರು: ಯಾವುದೇ ಭಾಷೆ ಕಣ್ಮರೆಯಾದರೆ ಆ ಭಾಷೆಯೊಂದಿಗೆ ಹೊಂದಿಕೊಂಡು ಬಂದಿರುವ ಸಂಸ್ಕೃತಿಯೂ ಮರೆಯಾದಂತೆ. ಈ ಕಾರಣದಿಂದ ಸಂಸ್ಕೃತಿಯ ಭಾಗವಾಗಿರುವ ಮಾತೃಭಾಷೆಯನ್ನು ಉಳಿಸಲು ಪ್ರತಿಯೊಬ್ಬರೂ ಕೊಡುಗೆಯನ್ನು ನೀಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ಸಂಜೆ ಪುತ್ತೂರು ತಾಲೂಕು ಕಸಾಪ ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಲಾದ 3 ದಿನಗಳ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆಯ ಉಳಿವಿಗೆ ಹೋರಾಟ ಮಾಡಬೇಕಾದ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಆದರೆ ಒಂದಷ್ಟು ಪ್ರಬುದ್ಧರು ಈ ಕಾರ್ಯದಲ್ಲಿ ನಿತ್ಯ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಭಾಷೆಯ ಉಳಿವಿನ ನಿಟ್ಟಿನಲ್ಲಿ ವಿದ್ಯಾವಂತರು, ಪ್ರಜ್ಞಾವಂತರ ಕೊಡುಗೆ ಏನು ಎಂಬುದನ್ನು ಯೋಚಿಸ ಬೇಕಾಗಿದೆ. ನಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಳ್ಳದಿದ್ದರೆ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ ಎಂದರು. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ, ಆಂಗ್ಲ ಭಾಷೆಗೆ ಎರಡನೇ ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಆಕಾಶವಾಣಿ ನಿರ್ದೇಶಕಿ ಉಷಾಲತಾ ಸರಪಾಡಿ ಮಾತನಾಡಿ, ಸಾಹಿತ್ಯದ ಕಾರ್ಯಕ್ರಮ ಗಳಲ್ಲಿ ಇಂದು ಯುವಜನತೆಯ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆ ಇರುವುದು ಮನೆಗಳಲ್ಲಿ. ಮಾತೃಭಾಷೆಯ ಕುರಿತ ಪ್ರೀತಿ ಈ ಕಾಲದ ಆವಶ್ಯಕತೆ ಎಂದರು.
ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಬಿತಾ ಮೋನಿಸ್ ಅವರ ವಿಶೇಷ ಸಾಧನೆಯನ್ನು ಗುರುತಿಸಿ ಸಮ್ಮಾನಿಸಲಾಯಿತು. 2018 -19 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂ. ಮಾ. ಪ್ರೌಢ ಶಾಲೆಯ ಸಿಂಚನಾಲಕ್ಷ್ಮಿ, ಕನ್ನಡ ಪ್ರಥಮ ಭಾಷೆಯಲ್ಲಿ 100 ಶೇ. ಅಂಕ ಪಡೆದ ಹಾಗೂ ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ಶ್ರೀಲಕ್ಷ್ಮೀ ಎನ್., ಸನ್ಮತಿ ಎಸ್. ಚೈತ್ರಾ ಎನ್.ಆರ್. ಹಾಗೂ ಕೃತಿ ಎಚ್.ಎಸ್. ಅವರನ್ನು ಸಮ್ಮಾನಿಸಲಾಯಿತು.
ತಾಲೂಕಿನಲ್ಲಿ ಶೇ. 100 ಫಲಿತಾಂಶ ಪಡೆದ ಮಂಜುನಾಥನಗರ ಸ.ಪ್ರೌ. ಶಾಲೆ, ಕೊತೆಗ ಮಣಿಕ್ಕರ ಹಾಗೂ ಕಾಣಿಯೂರು ಪ್ರಗತಿ ಕ. ಮಾ. ಪ್ರೌ. ಶಾಲೆಗಳ ಮುಖ್ಯಶಿಕ್ಷಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಪಿ. ಉಮಾಶಂಕರಿ ಮರಿಕೆ ಅವರ `ಭಾವಾಂತರಂಗ' ಹಾಗೂ ರಾಮಕುಂಜ ಪದವಿ ಕಾಲೇಜಿನ ವಿದ್ಯಾರ್ಥಿ ಸಹೋದರಿಯ ರಾದ ಜ್ಯೋತಿ ರಾವ್ ಎಚ್. ಮತ್ತು ಜ್ಯೋತ್ಸ್ನಾ ರಾವ್ ಎಚ್. ಅವರ `ಬಾಳಿನಾಗಸದಿಂದ' ಕವನ ಸಂಕಲನಗಳನ್ನು ಮಂಗಳೂರು ಆಕಾಶವಾಣಿ ನಿರ್ದೇಶಕಿ ಉಷಾಲತಾ ಸರಪಾಡಿ ಲೋಕಾರ್ಪಣೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ ಬೆಟ್ಟಂಪಾಡಿ ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ಯುವಕರನ್ನು ಸಂವೇದನಾಶೀಲರಾಗಿ ಮಾಡಬೇಕು. ಆಪ್ತತೆ, ಸಿಂಪತಿ ಅವರಲ್ಲಿ ಬೆಳೆಸಬೇಕು ಎಂದರು. ವಿದ್ಯಾರ್ಥಿಗಳನ್ನು ಸಮ್ಮಾನಿಸುವ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕ.ಸಾ.ಪ. ಪುತ್ತೂರು ಘಟಕದ ಗೌರವ ಕೋಶಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಕ.ಸಾ.ಪ. ಘಟಕದ ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಗೌರವ ಕಾರ್ಯದರ್ಶಿ ಡಾ. ಎಚ್.ಜಿ. ಶ್ರೀಧರ್ ಸ್ವಾಗತಿಸಿ, ಘಟಕದ ಅಧ್ಯಕ್ಷ ಐತಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಜ್ಯೋತಿ ರಾವ್ ಎಚ್. ಕಾರ್ಯಕ್ರಮ ನಿರ್ವಹಿಸಿದರು.







