ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್‍ಗೆ ಬಿಸಿ ಮುಟ್ಟಿಸಿದ ಸಂತ್ರಸ್ತರು: ಕಾರು ಅಡ್ಡಗಟ್ಟಿ ಪ್ರತಿಭಟನೆ

ಮಡಿಕೇರಿ ಜೂ.1 : ರಾಜ್ಯ ಪ್ರವಾಸೋದ್ಯಮ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಾ.ರಾ. ಮಹೇಶ್ ಅವರು ಕರ್ಣಂಗೇರಿ ಬಳಿ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಲು ಆಗಮಿಸಿದ ಸಂದರ್ಭ ಜಿಲ್ಲಾ ಬಿಜೆಪಿ ಪ್ರಮುಖರು, ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಸಂತ್ರಸ್ತರು ಸಚಿವರ ಕಾರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ರಾಜ್ಯ ಸರಕಾರ ಪ್ರಕೃತಿ ವಿಕೋಪ ಸಂತ್ರಸ್ತರನ್ನು ಕಡೆಗಣಿಸುತ್ತಿದೆ. ಸಮರ್ಪಕ ಪರಿಹಾರವನ್ನು ನೀಡದೆ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರ ಮತ್ತು ಉಸ್ತುವಾರಿ ಸಚಿವರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ವಿವಿಧ ರೀತಿಯಲ್ಲಿ ನೆರವಿನ ಹಣ ಬಂದಿದೆ. ಅದನ್ನು ಕೊಡಗು ಜಿಲ್ಲೆಗೆ ವಿನಿಯೋಗ ಮಾಡದೇ ದುರುಪಯೋಗ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಮನೆ ಕಳೆದುಕೊಂಡ ಪಂಚಾಯ್ತಿ ವ್ಯಾಪ್ತಿಯಲ್ಲೇ ಮಳೆಗಾಲ ಆರಂಭಕ್ಕೂ ಮುನ್ನವೇ ಮನೆಗಳನ್ನು ನೀಡಬೇಕು, ನದಿಗಳಲ್ಲಿ ತುಂಬಿರುವ ಹೂಳನ್ನು ತ್ವರಿತವಾಗಿ ತೆಗೆಯಬೇಕು. ಪ್ರಾಕೃತಿಕ ವಿಕೋಪ ಸಂಭವಿಸಿದ 8 ಪಂಚಾಯ್ತಿ ವ್ಯಾಪ್ತಿಯ ಜನರ ಬೆಳೆ ಸಾಲ ಮನ್ನಾ ಮಾಡಬೇಕು. ಮರ ಮತ್ತು ಮರಳನ್ನು ಮಾಲೀಕರಿಗೆ ನೀಡುವಂತೆ ಸಚಿವರಲ್ಲಿ ಬೇಡಿಕೆ ಮುಂದಿಟ್ಟರು. ಈ ಸಂದರ್ಭ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಂತ್ರಸ್ತರ ಬೇಡಿಕೆ ಆಲಿಸಿದ ಸಚಿವರು ಮಂಗಳವಾರ ಎಲ್ಲಾ ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತೇನೆ. ಜಿಲ್ಲೆಯ ಶಾಸಕರೂ, ಜಿಲ್ಲಾ ಪಂಚಾಯಿತಿ ಸದಸ್ಯರೂ, ಸಂತ್ರಸ್ತ ಗ್ರಾಮಗಳ ಜನಪ್ರತಿನಿಧಗಳನ್ನೂ ಸಭೆಗೆ ಕರೆಸುತ್ತೇನೆ ಎಂದು ಭರವಸೆ ನೀಡಿದರು. ಮಾತ್ರವಲ್ಲದೇ 15 ದಿನದೊಳಗೆ ಕೊಡಗಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಸಭೆ ನಡೆಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳತ್ತೇನೆ ಎಂದು ಭರವಸೆ ನೀಡಿದರು.
ಮಳೆಯಿಂದ ಮನೆಗಳಿಗೆ ಹಾನಿಯಾದ ಪ್ರಕರಣಗಳಿದ್ದರೆ ಅವುಗಳನ್ನು ಪರಿಗಣಿಸಲು ಉಪವಿಭಾಗಾಧಿಕಾರಿಗಳಿಗೆ ತಿಳಿಸಲಾಗಿದೆ. ಅಂತಹ ವ್ಯಕ್ತಿಗಳಿದ್ದರೆ ನೇರವಾಗಿ ಜಿಲ್ಲಾಡಳಿಕ್ಕೆ ಅರ್ಜಿ ಸಲ್ಲಿಸಬಹುದು. ಅವುಗಳನ್ನು ಪರಿಶೀಲಿಸ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ಹೇಳಿದರು. ಇದರಿಂದ ಪ್ರತಿಭಟನೆಯನ್ನು ಕೈಬಿಟ್ಟು ಸಚಿವರ ವಾಹನ ಮುಂದೆ ಸಾಗಲು ಅನುವು ಮಾಡಿಕೊಡಲಾಯಿತು. ದಿಢೀರ್ ರಸ್ತೆ ತಡೆ ನಡೆಸಿದ್ದರಿಂದಾಗಿ ಸಚಿವರ ಎಸ್ಕಾರ್ಟ್ ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿಗಳ ವಾಹನ ಕೂಡ ರಸ್ತೆಯಲ್ಲಿ ನಿಲ್ಲುವಂತಾಯಿತು.
ಉಸ್ತುವಾರಿ ಸಚಿವರು ಮುಂದಿನ 15 ದಿನಗಳಲ್ಲಿ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯಲಾಗಿದೆ. ಒಂದು ವೇಳೆ ಭರವಸೆ ಹುಸಿಯಾದರೆ ತೀವ್ರ ರೀತಿಯ ಹೋರಾಟವನ್ನು ರೂಪಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಎಚ್ಚರಿಕೆ ನೀಡಿದರು.







