ಮೋದಿ ಸರಕಾರದ 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು

ಹೊಸದಿಲ್ಲಿ, ಜೂ.1: ಗುರುವಾರ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 56 ಸಚಿವರಲ್ಲಿ 51 ಮಂದಿ ಕೋಟ್ಯಾಧೀಶ್ವರರು, 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ.
58 ಸಚಿವರಲ್ಲಿ ಲೋಕಸಭಾ ಸದಸ್ಯರಾಗಿರುವ 56 ಸಚಿವರ ವಿವರವನ್ನು ಚುನಾವಣಾ ಕಾವಲುಪಡೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಬಿಡುಗಡೆಗೊಳಿಸಿದೆ.
ಈಗ ಸಂಸತ್ತಿನ ಸದಸ್ಯರಾಗಿಲ್ಲದ ರಾಮ್‌ವಿಲಾಸ್ ಪಾಸ್ವಾನ್ ಮತ್ತು ಎಸ್. ಜೈಶಂಕರ್ ಅವರ ಕುರಿತ ವಿವರ ಇದರಲ್ಲಿ ಸೇರಿಲ್ಲ. ಸಚಿವ ಸಂಪುಟದ ಶೇ.91 ಅಂದರೆ 51 ಸಚಿವರು ಕೋಟ್ಯಾಧಿಪತಿಗಳಾಗಿದ್ದು ಇವರು ಸರಾಸರಿ 14.72 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಗೃಹ ಸಚಿವ ಅಮಿತ್ ಶಾ, ರೈಲ್ವೇ ಸಚಿವ ಪಿಯೂಷ್ ಗೋಯಲ್ ಮತ್ತು ಶಿರೋಮಣಿ ಅಕಾಲಿದಳದ ನಾಯಕಿ, ಆಹಾರ ಸಂಸ್ಕರಣೆ ಮತ್ತು ಉದ್ಯಮ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಸಹಿತ ನಾಲ್ವರು 40 ಕೋಟಿ ರೂ.ಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಪ್ರತಾಪ್‌ಚಂದ್ರ ಸಾರಂಗಿ, ಕೈಲಾಶ್ ಚೌಧರಿ ಮತ್ತು ರಾಮೇಶ್ವರ್ ತೇಲಿ ಸಹಿತ ಐವರು ಸಚಿವರು ಮಾತ್ರ 1 ಕೋಟಿ ರೂ.ಗಿಂತಲೂ ಕಡಿಮೆ ಆಸ್ತಿ ಹೊಂದಿದ್ದಾರೆ . 11 ಸಚಿವರು 41ರಿಂದ 50 ವರ್ಷದವರಾಗಿದ್ದರೆ 45 ಸಚಿವರು 51ರಿಂದ 70 ವರ್ಷದವರಾಗಿದ್ದಾರೆ. 8 ಸಚಿವರು 10ರಿಂದ 12ನೇ ತರಗತಿವರೆಗಿನ ವಿದ್ಯಾರ್ಹತೆ ಹೊಂದಿದ್ದರೆ, 47 ಸಚಿವರು ಪದವೀಧರರು. ಓರ್ವ ಸಚಿವ ಡಿಪ್ಲೊಮ ಪದವೀಧರ. ಸಚಿವರು ಸಲ್ಲಿಸಿರುವ ಅಫಿದಾವಿತ್‌ನ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ. 56 ಸಚಿವರಲ್ಲಿ 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ, ಇದರಲ್ಲಿ 16 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ( ಕೊಲೆ ಯತ್ನ, ಕೋಮು ಸೌಹಾರ್ದತೆಗೆ ಧಕ್ಕೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇತ್ಯಾದಿ) ದಾಖಲಾಗಿದೆ ಎಂದು ಎಡಿಎಆರ್ ವರದಿ ತಿಳಿಸಿದೆ.
ಕಳೆದ ಲೋಕಸಭೆಗೆ ಹೋಲಿಸಿದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ಸಚಿವರ ಪ್ರಮಾಣದಲ್ಲಿ ಶೇ.8 ಮತ್ತು ಗಂಭೀರ ಕ್ರಿಮಿನಲ್ ಹಿನ್ನಲೆಯುಳ್ಳ ಸಚಿವರ ಪ್ರಮಾಣದಲ್ಲಿ ಶೇ.12 ಏರಿಕೆಯಾಗಿದೆ. ಆರು ಸಚಿವರು ಧರ್ಮ, ಜಾತಿ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿಗಳ ಆಧಾರದಲ್ಲಿ ವಿವಿಧ ಗುಂಪುಗಳ ಮಧ್ಯೆ ದ್ವೇಷವನ್ನು ಉತ್ತೇಜಿಸಿದ ಪ್ರಕರಣ ಎದುರಿಸುತ್ತಿದ್ದಾರೆ. ಗಿರಿರಾಜ ಸಿಂಗ್ ಮತ್ತು ಅಶ್ವಿನಿ ಕುಮಾರ್ ಚೌಬೆ ಸೇರಿದಂತೆ ಮೂವರ ವಿರುದ್ಧ ಚುನಾವಣಾ ನೀರಿ ಸಂಹಿತೆ ಉಲ್ಲಂಘಿಸಿದ ಆರೋಪವಿದೆ.







