ನಳಿನ್ ಗೆಲುವು; ಸಂಭ್ರಮದ ವಿಜಯೋತ್ಸವ ಮೆರವಣಿಗೆ

ಮಂಗಳೂರು, ಜೂ.1: ಲೋಕಸಭಾ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಭಾರೀ ಅಂತರದೊಂದಿಗೆ ಭರ್ಜರಿ ಜಯ ಗಳಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಂಗಳೂರು ನಗರದಲ್ಲಿ ಶನಿವಾರ ಸಂಭ್ರಮದ ವಿಜಯೋತ್ಸವ ನಡೆಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಿಂದ ಆರಂಭಗೊಂಡ ವಿಜಯೋತ್ಸವ ಮೆರವಣಿಗೆ ಕ್ಲಾಕ್ ಟವರ್, ಜಿಎಚ್‌ಎಸ್ ರಸ್ತೆ, ಟೆಂಪಲ್ ಸ್ಕ್ವೇರ್, ರಥಬೀದಿ, ನ್ಯೂಚಿತ್ರಾ, ಅಳಕೆ, ದುರ್ಗಾ ಮಹಲ್, ಬಳ್ಳಾಲ್‌ಬಾಗ್, ಎಂಜಿ ರಸ್ತೆ, ಪಿವಿಎಸ್ ವೃತ್ತ ಮೂಲಕ ಸಾಗಿ ಬಿಜೆಪಿ ಜಿಲ್ಲಾ ಕಚೇರಿ ಬಳಿ ಸಮಾಪನಗೊಂಡಿತು. ಹಾದಿಯುದ್ದಕ್ಕೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿಬಂದು ಸಂಭ್ರಮಿಸಿದರು.
ಲಯಬದ್ಧವಾಗಿ ಕುಣಿಯುವ ಕಾರ್ಯಕರ್ತರು ಒಂದೆಡೆಯಾದರೆ, ಹುಚ್ಚೆದ್ದು ಕುಣಿದು ಬಿಜೆಪಿಯ ವಿಜಯದ ಸಂತಸವನ್ನು ಇಮ್ಮಡಿಗೊಳಿಸಿದವರು ಇನ್ನೂ ಕೆಲ ಕಾರ್ಯಕರ್ತರು. ಸಂಸದ ನಳಿನ್ ಕುಮಾರ್ ಅವರನ್ನು ಮೆರವಣಿಗೆಯ ಉದ್ದಕ್ಕೂ ಕಾರ್ಯಕರ್ತರು, ಸಾರ್ವಜನಿಕರು ಅಭಿನಂದಿಸಿದರು.
ಸಂಸದ ನಳಿನ್ ಮತ್ತು ಬಿಜೆಪಿ ಮುಖಂಡರು ತೆರೆದ ವಾಹನದಲ್ಲಿ ಸಾಗಿದರು. ಕೆಲವೆಡೆ ಸಂಸದರು ರಸ್ತೆಯಲ್ಲಿ ಕಾರ್ಯಕರ್ತರ ಜತೆಗೂಡಿ ಹೆಜ್ಜೆ ಹಾಕಿದರು. ಹಿರಿಯ ಕಾರ್ಯಕರ್ತರಿಗೆ ನಮಿಸಿದರು. ಮೆರವಣಿಗೆ ಸಾಗಿಬಂದ ಹಾದಿಯುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಖುಷಿಪಟ್ಟರು. ಮೆರವಣಿಗೆಯಲ್ಲಿ ಮೋದಿ ವೇಷಧಾರಿಗಳು ಗಮನ ಸೆಳೆದರು.
ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ ಮಿಜಾರ್, ನಿತಿನ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಸುದರ್ಶನ ಮೂಡುಬಿದಿರೆ, ಪ್ರೇಮಾನಂದ ಶೆಟ್ಟಿ, ರಾಜೇಶ್ ಭಾಗವಹಿಸಿದ್ದರು.
ಚುನಾವಣೆ ಫಲಿತಾಂಶ ಘೋಷಣೆಯಾದ ದಿನ ಸೆಕ್ಷನ್ ಹೇರಿಕೆಯಾಗಿದ್ದ ಕಾರಣ ವಿಜಯೋತ್ಸವಕ್ಕೆ ಅವಕಾಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಭರ್ಜರಿ ವಿಜಯೋತ್ಸವ ನಡೆಯಿತು.









