ಗೋಡ್ಸೆ ಪರ ವಕಾಲತ್ತು ವಹಿಸಿದ್ದ ಪ್ರಜ್ಞಾ ಸಿಂಗ್ ಚುನಾವಣೆಯಲ್ಲಿ ಗೆಲ್ಲಬಾರದಿತ್ತು: ಪೇಜಾವರ ಶ್ರೀ

ಮೈಸೂರು,ಜೂ.1: ಗೋಡ್ಸೆ ಪರ ವಕಾಲತ್ತು ವಹಿಸಿದ್ದ ವ್ಯಕ್ತಿ ಚುನಾವಣೆಯಲ್ಲಿ ಗೆದ್ದಿದ್ದು ನನಗೆ ಅಸಮಧಾನ ತಂದಿದೆ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಡ್ಸೆ ದೇಶ ಭಕ್ತ ಎಂದು ಗೋಡ್ಸೆ ಪರ ವಕಾಲತ್ತು ವಹಿಸಿದ್ದ ಪ್ರಜ್ಞಾಸಿಂಗ್ ಗೆಲ್ಲಬಾರದಿತ್ತು. ಈಕೆ ಗೆದ್ದಿರುವುದು ನನಗೆ ಅಸಮಾಧಾನ ತಂದಿದೆ ಎಂದು ಹೇಳಿದರು.
ಕಾಶ್ಮೀರ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಸೌಹಾರ್ದತೆಯಿಂದ ಬಗೆಹರಿಸಬೇಕು. ಅಲ್ಲಿರುವ ಹಿಂದೂ ಮುಸ್ಲಿಮರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. 370ನೇ ವಿಧಿ ಅತೀಸೂಕ್ಷ್ಮ ವಿಚಾರ, ಆ ಬಗ್ಗೆ ಚರ್ಚಿಸಲು ನಾನು ಹೋಗುವುದಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಪೇಜಾವರ ಶ್ರೀ, ಇಂತಹ ಹಿರಿಯ ನಾಯಕರು ಗೆಲ್ಲಬೇಕಾಗಿತ್ತು. ಬಿಜೆಪಿಯನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್, ಕಾಂಗ್ರೆಸ್ ಒಂದಾಗಿದ್ದರಿಂದ ಜನರಲ್ಲಿ ಹಿಂದುತ್ವದ ಭಾವನೆ ಜಾಗೃತವಾಯಿತು. ಅದೇ ಕಾರಣದಿಂದ ಈ ಎಲ್ಲಾ ನಾಯಕರು ಸೋಲಬೇಕಾಗಿ ಬಂತು ಎಂದು ಹೇಳಿದರು.
ಸರ್ವಧರ್ಮ ಸಮಾನತೆ ದೇಶಾದ್ಯಂತ ಜಾರಿಗೆ ಬರಬೇಕು. ಮುಸ್ಲಿಮರಿಗೆ ಹೆಚ್ಚಿನ ಸವಲತ್ತು ಲಭಿಸುತ್ತಿದೆ. ಹಿಂದೂಗಳಿಗೆ ಕಡಿಮೆ ಇದೆ. ಈ ರೀತಿಯ ಪರಿಸ್ಥಿತಿ ಹೋಗಬೇಕು. ಎಲ್ಲಾ ಧರ್ಮದವರು ಸಮಾನವಾದ ಸವಲತ್ತು ಹೊಂದಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿಯಮಗಳನ್ನು ಜಾರಿಗೆ ತರಬೇಕು ಎಂದ ಅವರು, ರಾಮಮಂದಿರ ನಿರ್ಮಾಣ ಕೇಂದ್ರ ಸರ್ಕಾರದ ಆದ್ಯತೆ ಆಗಬೇಕು. ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ಬರಬೇಕು ಎಂದು ಹೇಳಿದರು.







