ಕೇಂದ್ರದ ನೂತನ ಸಚಿವರಿಗೆ ರಾಜ್ಯದಲ್ಲಿ ಅದ್ದೂರಿ ಸ್ವಾಗತ

ಬೆಂಗಳೂರು, ಜೂ. 1: ಕೇಂದ್ರದ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರದ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶನಿವಾರ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸದಾನಂದಗೌಡ ಅವರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳ ವಾದ್ಯಗಳೊಂದಿಗೆ ಹೂಗುಚ್ಚ ನೀಡಿ ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ಬಚ್ಚೇಗೌಡ, ನಟ ಜಗ್ಗೇಶ್ ಸೇರಿ ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹೊಸದಿಲ್ಲಿಯಿಂದ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ಕಚೇರಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದೇ ವೇಳೆ ಪಕ್ಷದ ಮುಖಂಡರು ಹೂಗುಚ್ಚ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಲೇಹರ್ ಸಿಂಗ್, ಚಿ.ನಾ. ರಾಮು ಉಪಸ್ಥಿತರಿದ್ದರು.
ಅತ್ತ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ದಿಲ್ಲಿಯಿಂದ ಬಂದಿಳಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
‘ಜನರ ಆಶೀರ್ವಾದದಿಂದ ನನಗೆ ಸಚಿವನಾಗುವ ಅವಕಾಶ ಸಿಕ್ಕಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಅನೇಕ ಬೇಡಿಕೆಗಳಿವೆ. ಈ ಸಂಬಂಧ ಈಗಾಗಲೇ ನೈರುತ್ಯ ರೈಲ್ವೇ ವಲಯ ಪ್ರಬಂಧಕರ ಜತೆಗೆ ಚರ್ಚಿಸಿದ್ದೇನೆ. ಹೊಸ ಯೋಜನೆಗಿಂತ, ಬಾಕಿ ಉಳಿದ ಯೋಜನೆ ಅನುಷ್ಠಾನಕ್ಕೆ ಮೊದಲು ಆದ್ಯತೆ ಕೊಡುತ್ತೇನೆ’
-ಸುರೇಶ್ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ







.jpg)
.jpg)
.jpg)
.jpg)

