ಜುಲೈ 5ರಂದು ಕೇಂದ್ರ ಸರಕಾರದ ಬಜೆಟ್ ಮಂಡನೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು, ಜೂ.1: ಲೋಕಸಭೆಯ ಅಧಿವೇಶನವು ಜೂ.17ರಿಂದ ಆರಂಭಗೊಳ್ಳುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೂತನ ಸರಕಾರದ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 5ರಂದು ಮಂಡಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ರಾಜ್ಯಕ್ಕೆ ಆಗಮಿಸಿದ ಅವರು, ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜೂ.17 ಹಾಗೂ 18ರಂದು ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಪ್ರಕ್ರಿಯೆ ನಡೆಯಲಿದೆ. 19ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ಜೂ.20ರಂದು ರಾಷ್ಟ್ರಪತಿಗಳು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಮೂರು ದಿನಗಳ ಕಾಲ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ನಡೆಯಲಿದೆ. ಹಿಂದಿನ ಸರಕಾರ ಹೊರಡಿಸಿದ್ದ 10ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳನ್ನು ಪರಿವರ್ತನೆ ಮಾಡಿ, ಕಾನೂನು ಸ್ವರೂಪ ನೀಡುವ ಪ್ರಕ್ರಿಯೆ ಜೂ.23ರಿಂದ ನಡೆಯಲಿದೆ ಎಂದು ಅವರು ಹೇಳಿದರು. ರಾಜ್ಯಸಭೆಯಿಂದ ಅಂಗೀಕಾರವಾಗಿ ಬಂದಿರುವ ಒಂಭತ್ತಕ್ಕೂ ಹೆಚ್ಚು ವಿಧೇಯಕಗಳ ಮೇಲೆ ಲೋಕಸಭೆಯಲ್ಲಿ ಚರ್ಚಿಸಲಾಗುವುದು. ಜು.4ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಐದು ವರ್ಷಗಳ ಕಾಲ ನಾವು ಯಶಸ್ವಿಯಾಗಿ ಅಧಿವೇಶನಗಳನ್ನು ನಡೆಸಲು, ಯಾವುದೇ ಸಮಸ್ಯೆಗಳು, ವಿಚಾರಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಸಿದ್ಧವಿದ್ದು, ವಿರೋಧ ಪಕ್ಷಗಳು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
15 ದಿನಗಳಿಗೊಮ್ಮೆ ಸಭೆ: ರಾಜ್ಯದಿಂದ ನಾವು ನಾಲ್ಕು ಜನ ಸಚಿವರಾಗಿದ್ದೇವೆ. ಪ್ರತಿ 15 ದಿನಗಳಿಗೊಮ್ಮೆ ನಾಲ್ಕು ಜನ ಸಚಿವರು ಯಾರಾದರೂ ಒಬ್ಬ ಸಚಿವರ ಮನೆಯಲ್ಲಿ ಸೇರಿ ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಷಯ, ವಿಚಾರಗಳ ಬಗ್ಗೆ ಚರ್ಚೆ ಮಾಡಿ, ಕೇಂದ್ರ ಸರಕಾರದಿಂದ ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಮಹಾದಾಯಿ ಸೂಕ್ಷ್ಮ ವಿಚಾರ: ಮಹಾದಾಯಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಅದು ಇತ್ಯರ್ಥವಾಗುವವರೆಗೆ ನೋಟಿಫಿಕೇಷನ್ ಹೊರಡಿಸಲು ಸಾಧ್ಯವಿಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಕಲ್ಲಿದ್ದಲ್ಲು ದಾಸ್ತಾನು: ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 16 ರಿಂದ 17 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಲಭ್ಯವಿದೆ. ರಾಷ್ಟ್ರೀಯ ಸರಾಸರಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಶೇ.84ರಷ್ಟು ಕಲ್ಲಿದ್ದಲು ದಾಸ್ತಾನಿದ್ದರೆ, ನಮ್ಮ ರಾಜ್ಯದಲ್ಲಿ ಶೇ.86 ರಷ್ಟಿದೆ. ರಾಜ್ಯ ಸರಕಾರ ವಿದ್ಯುತ್ ಉತ್ಪಾದನೆಗೆ ಮುಂದಾಗಲಿ, ನಾವು ಸಹಕಾರ ನೀಡುತ್ತೇವೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಲೇಹರ್‌ಸಿಂಗ್, ಎನ್.ರವಿಕುಮಾರ್, ಮುಖಂಡರಾದ ಚಿ.ನಾ.ರಾಮು, ವಾಮನ್ ಆಚಾರ್ಯ, ಎಸ್.ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







