ಸ್ಪೇನ್ ಮಾಜಿ ಸ್ಟೈಕರ್ ರೆಯೆಸ್ ರಸ್ತೆ ಅಪಘಾತಕ್ಕೆ ಬಲಿ

ಮ್ಯಾಡ್ರಿಡ್,ಜೂ.1: ಅರ್ಸೆನಲ್, ರಿಯಲ್ ಮ್ಯಾಡ್ರಿಡ್ ಹಾಗೂ ಸ್ಪೇನ್‌ನ ಮಾಜಿ ಸ್ಟಾರ್ ಆಟಗಾರ ಜೋಸ್ ಆಂಟೊನಿಯೊ ರೆಯೆಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ತವರುಪಟ್ಟಣದ ಫುಟ್ಬಾಲ್ ಕ್ಲಬ್ ಸೆವಿಲ್ಲಾ ಶನಿವಾರ ತಿಳಿಸಿದೆ. ರೆಯೆಸ್‌ಗೆ 35 ವರ್ಷ ವಯಸ್ಸಾಗಿತ್ತು. ಅರ್ಸೆನಲ್,ರಿಯಲ್ ಮ್ಯಾಡ್ರಿಡ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ಪರ ಆಡಿದ್ದ ರೆಯೆಸ್ ತನ್ನ 16ನೇ ವಯಸ್ಸಿನಲ್ಲಿ ಸೆವಿಲ್ಲಾ ತಂಡದಲ್ಲಿ ವೃತ್ತಿಪರ ಫುಟ್ಬಾಲ್‌ಗೆ ಕಾಲಿಟ್ಟಿದ್ದರು. 2004ರಲ್ಲಿ ಅರ್ಸೆನಲ್‌ಗೆ ವರ್ಗಾವಣೆಯಾಗಿದ್ದರು. ಅರ್ಸೆನಲ್ ಪರ 2004ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿದ್ದರು.2006ರಲ್ಲಿ ರಿಯಲ್ ಮ್ಯಾಡ್ರಿಡ್‌ಗೆ ಸೇರ್ಪಡೆಯಾಗಿದ್ದ ಅವರು ಲಾ ಲಿಗ ಪ್ರಶಸ್ತಿ ಜಯಿಸಿದ್ದರು.
2012ರಲ್ಲಿ ತನ್ನ ಬಾಲ್ಯದ ಕ್ಲಬ್ ಸೆವಿಲ್ಲಾಗೆ ವಾಪಸಾಗಿದ್ದ ರೆಯೆಸ್ 2014ರಿಂದ 2016ರ ನಡುವೆ ಸತತ ಮೂರು ಬಾರಿ ಯುರೋಪ್ ಲೀಗ್ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಮೇ 18 ರಂದು ಸ್ಪೇನ್‌ನ ಎಕ್ಸ್ ಟ್ರಿಮಾದುರಾ ಪರ ಕೊನೆಯ ಪಂದ್ಯ ಆಡಿದ್ದರು.
ರಾಷ್ಟ್ರೀಯ ತಂಡ ಸ್ಪೇನ್ ಪರವಾಗಿ 2003ರಿಂದ 2006ರ ತನಕ 21 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಅವರು ಕೇವಲ 4 ಗೋಲು ಗಳಿಸಿದ್ದರು. ‘‘ನಮ್ಮ ಆಟಗಾರ ಜೋಸ್ ಅಂಟೊನಿಯೊ ರೆಯೆಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ತಿಳಿಸಲು ನೋವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಬೇಕೆಂದು ಕೇಳಿಕೊಳ್ಳುತ್ತೇವೆ’’ ಎಂದು ಕ್ಲಬ್ ತಿಳಿಸಿದೆ.







