ಬಿಜೆಪಿ ಶಾಸಕನ ಶಾಲೆಯಲ್ಲಿ ಬಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ: ತನಿಖೆ ಆರಂಭ
ರೈಫಲ್ ಗಳಿಗೆ ಗುಂಡು ತುಂಬಿಸಿದ ಬಾಲಕರು: ಫೋಟೊ ವೈರಲ್

ಥಾಣೆ, ಜೂ. 1: ಮಹಾರಾಷ್ಟ್ರದ ಮೀರಾ ರೋಡ್‌ನಲ್ಲಿರುವ ಬಿಜೆಪಿ ಶಾಸಕನ ಶಾಲೆಯಲ್ಲಿ ಬಜರಂಗದಳ ನಡೆಸಿದ ಶಸ್ತ್ರಾಸ್ತ್ರ ತರಬೇತಿ ಶಿಬಿರದ ಬಗ್ಗೆ ಥಾಣೆ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸರಕಾರೇತರ ಸಂಸ್ಥೆ ಡೆಮಾಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದ ಬಳಿಕ ಥಾಣೆ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಶಾಲೆಯ ಸೆವೆನ್ ಇಲೆವೆನ್ ಅಕಾಡೆಮಿಯಲ್ಲಿ ನಡೆದ ಶಸ್ತ್ರಾಸ್ತ್ರ ತರಬೇತಿ ಶಿಬಿರದ ಛಾಯಾಚಿತ್ರ ಫೇಸ್‌ಬುಕ್‌ನಲ್ಲಿ ಕಂಡು ಬಂದ ಬಳಿಕ ಡೆಮಾಕ್ರೆಟಿಕ್ ಯೂತ್ ಪೆಡರೇಶನ್ ಆಫ್ ಇಂಡಿಯಾ ಬುಧವಾರ ನಾಗಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿತ್ತು. ಪ್ರಕಾಶ್ ಗುಪ್ತಾ ಎಂಬ ಬಳಕೆದಾರ ತನ್ನ ಖಾತೆಯಲ್ಲಿ ಈ ಛಾಯಾಚಿತ್ರವನ್ನು ಶೇರ್ ಮಾಡಿಕೊಂಡಿದ್ದರು.
ಶಿಬಿರವನ್ನು ಮೇ 25ರಿಂದ ಜೂನ್ 1ರ ವರೆಗೆ ಆಯೋಜಿಸಲಾಗಿತ್ತು ಎಂದು ಅದರಲ್ಲಿ ಹೇಳಿದ್ದರು. ಶಾಲೆಯ ಆವರಣದಲ್ಲಿ ಬಾಲಕರು ಹಲವು ರೈಫಲ್‌ಗಳಿಗೆ ಗುಂಡು ತುಂಬಿಸುವುದು ಹಾಗೂ ನಿರ್ವಹಿಸುವ ದೃಶ್ಯ ಈ ಛಾಯಾಚಿತ್ರದಲ್ಲಿ ಇತ್ತು. ‘‘ಇವರಲ್ಲಿ ಕೆಲವರು ಅಪ್ರಾಪ್ತರು ಎಂದು ಕಾಣುತ್ತದೆ. ಅವರು ಶಸ್ತ್ರಾಸ್ತ್ರಗಳನ್ನು ನಿಭಾಯಿಸುವುದು ಅಪಾಯಕಾರಿ. ದೇಶದಲ್ಲಿ ಹಿಂಸಾಚಾರಕ್ಕೆ ಮತ್ತೆ ಮತ್ತೆ ಉತ್ತೇಜಿಸುತ್ತಿರುವ ಬಜರಂಗದಳದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ’’ ಎಂದು ಸಂಘಟನೆಯ ಕಾರ್ಯದರ್ಶಿ ಹಾಗೂ ವಕೀಲ ಸಂಜಯ್ ಪಾಂಡೆ ಹೇಳಿದ್ದಾರೆ. ಬಜರಂಗದಳ ಹಾಗೂ ಹಾಗೂ ಶಾಲೆಯ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವಂತೆ ಸಂಘಟನೆ ಮನವಿ ಮಾಡಿದೆ ಎಂದು ಪಾಂಡೆ ತಿಳಿಸಿದ್ದಾರೆ.
ನಮ್ಮ ಮನವಿ ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು. ನಾವು ಮನವಿ ಸಲ್ಲಿಸಿ ಹಿಂದಿರುಗಿದ್ದೆವು. ಶುಕ್ರವಾರ ನಾವು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅತುಲ್ ಕುಲಕರ್ಣಿ ಅವರನ್ನು ಭೇಟಿಯಾಗಿದ್ದೆವು ಹಾಗೂ ಈ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೆವು. ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ಪಾಂಡೆ ತಿಳಿಸಿದ್ದಾರೆ.







