'ಕೆಲವು ಮಂದಿ ಹೊಟ್ಟೆಪಾಡಿಗಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ'
ಮುಖ್ತರ್ ಅಬ್ಬಾಸ್ ನಕ್ವಿ ತಿರುಗೇಟು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನಗಳಿಗೆ ಭೇಟಿ ನೀಡಬಹುದಾದರೆ, ಮುಸ್ಲಿಮರು ಏಕೆ ಮಸೀದಿಗೆ ಭೇಟಿ ನೀಡಬಾರದು ಎಂದು ಪ್ರಶ್ನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಉವೈಸಿಯವರಿಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ತಿರುಗೇಟು ನಿಡಿದ್ದಾರೆ.
"ಕೆಲ ಮಂದಿ ಹೊಟ್ಟೆಪಾಡಿಗಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ" ಎಂದು ನಕ್ವಿ ಲೇವಡಿ ಮಾಡಿದ್ದಾರೆ.
"ಕೆಲ ಮಂದಿ ಹೊಟ್ಟೆಪಾಡಿಗಾಗಿ ಧರ್ಮ, ಜಾತಿ ಅಥವಾ ಪ್ರದೇಶದ ಆಧಾರದಲ್ಲಿ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಇದು ಯಾರಿಗೂ ನೆರವಾಗುವುದಿಲ್ಲ. ಮೋದಿ ದೇಶದ 130 ಕೋಟಿ ಜನರ ವಿಶ್ವಾಸ ಪಡೆದಿದ್ದಾರೆ, ಮೋದಿಯವರ ಆಡಳಿತದಲ್ಲಿ ಜನ ಸುಭದ್ರವಾಗಿದ್ದಾರೆ" ಎಂದು ನಕ್ವಿ ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ ಉವೈಸಿ, "ಮೋದಿ ದೇವಸ್ಥಾನಕ್ಕೆ ಭೇಟಿ ನೀಡಬಹುದಾದರೆ ನಾವೂ ಮಸೀದಿಗೆ ಹೋಗಬಹುದು; ಮೋದಿ ಗುಹೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂದಾದರೆ, ನಾವು ಕೂಡಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು. 300 ಸ್ಥಾನಗಳನ್ನು ಗೆಲ್ಲುವುದು ದೊಡ್ಡದಲ್ಲ; ಏಕೆಂದರೆ ಭಾರತದಲ್ಲಿ ಜೀವಂತ ಸಂವಿಧಾನ ಇದೆ. ಬಿಜೆಪಿಯ 300 ಸೀಟುಗಳು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗದು" ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ನಕ್ವಿ, "ಮೋದಿಯವರು ಯಾವ ತಾರತಮ್ಯವೂ ಇಲ್ಲದೇ ದೇಶದ 130 ಕೋಟಿ ಜನರ ಅಭಿವೃದ್ಧಿಗೆ ಮುಂದಾಗಿದ್ದರು. ಘನತೆಯುತ ಅಭಿವೃದ್ಧಿ ಬಗ್ಗೆ ಅವರು ಮಾತನಾಡಿದ್ದಾರೆ. ರೈತರು, ಯುವಕರು ಮೋದಿ ಸರ್ಕಾರದ ಆದ್ಯತೆ. ಹಿಂದೆ ಕೂಡಾ ಅವರಿಗಾಗಿ ನಾವು ಶ್ರಮಿಸಿದ್ದೇವೆ" ಎಂದು ಸಮರ್ಥಿಸಿಕೊಂಡಿದ್ದಾರೆ.







