ಬಿಹಾರ ರಾಜ್ಯ ಸಂಪುಟ ವಿಸ್ತರಣೆ: ಬಿಜೆಪಿಗೆ ತಿರುಗೇಟು ನೀಡಿದ ನಿತೀಶ್ ಕುಮಾರ್

ಪಾಟ್ನಾ,ಜೂ.2: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಕೇವಲ ಒಂದು ಸಚಿವ ಸ್ಥಾನ ನೀಡಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರವಿವಾರ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಬಿಜೆಪಿಗೆ ಕೇವಲ ಒಂದು ಸಚಿವ ಸ್ಥಾನ ನೀಡಿ ರಾಜ್ಯ ಬಿಜೆಪಿ ಘಟಕಕ್ಕೆ ತಿರುಗೇಟು ನೀಡಿದ್ದಾರೆ.
ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೈಹಾಕಿದ ಕುಮಾರ್ ತನ್ನ ಪಕ್ಷದ 8 ಸಹೋದ್ಯೋಗಿಗಳಿಗೆ ಸಚಿವ ಸ್ಥಾನ ನೀಡಿದ್ದು, ಮೈತ್ರಿ ಪಕ್ಷ ಬಿಜೆಪಿಗೆ ಕೇವಲ ಒಂದು ಸ್ಥಾನ ನೀಡಿದ್ದಾರೆ. ಬಿಜೆಪಿ ಈ ತನಕ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಹೆಸರಿಸಿಲ್ಲ.
ನಾಲ್ಕು ಇಲಾಖೆಗಳನ್ನು ನಿಭಾಯಿಸುತ್ತಿರುವ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ನಿತೀಶ್ ಕುಮಾರ್ ಬಿಜೆಪಿಗೆ ಖಾಲಿ ಇರುವ ಒಂದು ಸಚಿವ ಸ್ಥಾನ ಭರ್ತಿ ಮಾಡುವಂತೆ ಸೂಚಿಸಿದ್ದಾರೆ. ಬಿಜೆಪಿ ಇದನ್ನು ಭರ್ತಿ ಮಾಡುವ ಕುರಿತು ನಿರ್ಧರಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದ ಬಳಿಕ ಬಿಜೆಪಿ ತನ್ನನ್ನು ನಡೆಸಿಕೊಂಡ ರೀತಿಗೆ ನಿತೀಶ್ ಕುಮಾರ್ ತೀವ್ರ ಬೇಸರಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
‘‘ಕೇಂದ್ರ ಸರಕಾರದಲ್ಲಿ ಸಾಂಕೇತಿಕ ಪ್ರತಿನಿಧಿಯಾಗಲು ನಮ್ಮ ಪಕ್ಷ ಬಯಸುವುದಿಲ್ಲ. ನಮ್ಮ ಪಕ್ಷ ಬಿಹಾರದಲ್ಲಿ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 16ರಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 17ರಲ್ಲಿ ಸ್ಪರ್ಧಿಸಿತ್ತು. ನಾವು ಬಿಹಾರದ ಹಿತದೃಷ್ಟಿಯಿಂದ ಮೈತ್ರಿ ಸರಕಾರ ರಚಿಸಿದ್ದೇವೆ. ಕೇಂದ್ರದಲ್ಲಿ ಸಚಿವ ಸ್ಥಾನವನ್ನು ಸಾಂಕೇತಿಕ ಹಂಚಿಕೆಗೆ ನಮ್ಮ ಸಹಮತವಿಲ್ಲ. ನಾವು ನಿಮ್ಮಾಂದಿಗಿದ್ದೇವೆ ಎಂದು ಬಿಜೆಪಿಗೆ ತಿಳಿಸಿದ್ದೇವೆ’’ ಎಂದು ವರದಿಗಾರರಿಗೆ ನಿತೀಶ್ ತಿಳಿಸಿದ್ದಾರೆ.







