ಬರಿದಾಗುತ್ತಿರುವ ಸ್ವರ್ಣೆ: ಬಜೆಯಲ್ಲಿ 5 ದಿನಗಳಿಗಷ್ಟೆ ನೀರು
24 ಜಲಮೂಲಗಳಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಸಿದ್ಧತೆ

ಉಡುಪಿ ಜೂ.2: ಈವರೆಗೆ ಮಳೆ ಬಾರದ ಪರಿಣಾಮ ಉಡುಪಿ ನಗರ ಸಭೆಗೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಇನ್ನು ಕೇವಲ ಐದಾರು ದಿನಗಳಿಗೆ ಬೇಕಾದಷ್ಟು ಮಾತ್ರ ನೀರಿನ ಸಂಗ್ರಹವಿದೆ.
ಸದ್ಯ ನಗರಕ್ಕೆ ಆರು ವಿಭಾಗಗಳಾಗಿ ವಿಂಗಡಿಸಿ ಆರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಪ್ರತಿದಿನ ಬಜೆಯಿಂದ 8-9ಗಂಟೆಗಳ ಕಾಲ ಪಂಪಿಂಗ್ ಮಾಡಲಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಪಂಪಿಂಗ್ ಅವಧಿ ಯನ್ನು 3-4 ಗಂಟೆಗೆ ಇಳಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಸ್ವರ್ಣ ನದಿಯ ಪುತ್ತಿಗೆ ಮಠ ಹಾಗೂ ಅಲ್ಲೆ ಸಮೀಪ ಇರುವ ಗುಂಡಿ ಯಿಂದ ಡ್ರೆಡ್ಜಿಂಗ್ ಮೂಲಕ ನೀರನ್ನು ಹಾಯಿಸಲಾಗುತ್ತಿದೆ. ಅಲ್ಲಿಂದ ನೀರು ಬಜೆ ಡ್ಯಾಂನ ಜಾಕ್‌ವೆಲ್ ಹರಿದು ಬರುತ್ತಿದ್ದು, ಈಗ 1.4 ಮೀಟರ್ ನೀರಿನ ಸಂಗ್ರಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವರ್ಣ ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯ ಆಗಮನವೊಂದೆ ಇದಕ್ಕೆಲ್ಲ ಪರಿಹಾರ ಎಂಬಂತೆ ಅಧಿಕಾರಿಗಳು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ವಾರ ದಲ್ಲಿ ಮಳೆ ಕೈಕೊಟ್ಟರೆ ಪರ್ಯಾಯ ಕ್ರಮವಾಗಿ ನಗರದಲ್ಲಿ 24 ಬಾವಿ ಹಾಗೂ ಕೊಳವೆ ಬಾವಿಗಳನ್ನು ಗುರುತಿಸಿ ಇಡಲಾಗಿದೆ. ಈ ಎಲ್ಲ ಜಲಮೂಲಗಳಲ್ಲಿ ನೀರಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಗರಸಭೆ ಸಿದ್ಧತೆ ನಡೆಸಿದೆ.
ಸಂಸದೆ ಶೋಭಾ ಭೇಟಿ: ಉಡುಪಿ ನಗರದಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ಬಜೆ ಅಣೆಕಟ್ಟಿಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರಿನ ಮಟ್ಟ ಹಾಗೂ ಪಂಪ್ ಅಳವಡಿಸಿರುವ ಕುರಿತು ಅಪರ ಜಿಲ್ಲಾಧಿ ಕಾರಿ ವಿದ್ಯಾ ಕುಮಾರಿ, ನಗರಸಭೆಯ ಪರಿಸರ ಇಂಜಿನಿಯರ್ ರಾಘವೇಂದ್ರ ಅವರಿಂದ ಮಾಹಿತಿ ಪಡೆದರು. ಮುಂದೆ ಅನುಸರಿಸಬೇಕಾದ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಾರದ ರೀತಿಯಲ್ಲಿ ಗಮನಹರಿಸಲು ಸಂಸದೆ ಅಧಿಕಾರಿ ಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಸುವರ್ಣ, ಪ್ರವೀಣ್ ಕುಮಾರ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ್ ಬಾಬು, ನಗರಸಭೆ ಸದಸ್ಯರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಮಂಜುನಾಥ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು.







