ರಾಮಕೃಷ್ಣ ಮಿಷನ್‌ನಿಂದ ಮಂಗಳೂರು ಸ್ವಚ್ಛತಾ ಶ್ರಮದಾನ
ಬೊಕ್ಕಪಟ್ಣ ತೋಡುಗಳಲ್ಲಿದ್ದ ಕಸ-ಕಡ್ಡಿ ತೆರವು

ಮಂಗಳೂರು, ಜೂ.2: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ 26ನೇ ವಾರದ ಶ್ರಮದಾನವನ್ನು ರವಿವಾರ ಬೆಳಗ್ಗೆ ಬೊಕ್ಕಪಟ್ಣದಲ್ಲಿ ಆಯೋಜಿಸಲಾಯಿತು.
ಬೊಕ್ಕಪಟ್ಣ ಸ್ಪಂದನ ಜನರಲ್ ಆಸ್ಪತ್ರೆಯ ಸಮೀಪದಲ್ಲಿ ಶ್ರಮದಾನಕ್ಕೆ ಮನಪಾ ಮಾಜಿ ಮಹಾಪೌರ ದಿವಾಕರ್ ಕೆ. ಹಾಗೂ ಸಾಮಾಜಿಕ ಕಾರ್ಯಕರ್ತ ರೋಹನ್ ಸಿರಿ ಜಂಟಿಯಾಗಿ ಚಾಲನೆ ನೀಡಿದರು.
ಮನಪಾ ಮಾಜಿ ಮಹಾಪೌರ ದಿವಾಕರ್ ಕೆ. ಮಾತನಾಡಿ, ‘ಸ್ವಚ್ಛತೆಯ ವಿಷಯದಲ್ಲಿ ಜನರು ರಾಜಿ ಮಾಡಿಕೊಳ್ಳಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳು ಶುಚಿಯಾಗಿಲ್ಲದಿದ್ದರೆ ಪಾಲಿಕೆಯ ಗಮನ ಸೆಳೆಯುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು; ಇಂತಹ ವಿಷಯದಲ್ಲಿ ಸಹನೆ ಒಳ್ಳೆಯದಲ್ಲ. ನಮ್ಮ ಸಹನೆ ಎಂದಿಗೂ ದೌರ್ಬಲ್ಯವಾಗಬಾರದು ಎಂದು ಹೇಳಿದರು.
ಇದೀಗ ನಗರದ ಬೀದಿಬೀದಿಗಳು ಸ್ವಚ್ಛವಾಗುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್ ಶ್ರಮವೇ ಕಾರಣ. ಅದನ್ನು ಯಥಾಪ್ರಕಾರವಾಗಿ ಸ್ವಚ್ಛವಾಗಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಆಯಾ ಪರಿಸರದ ಜನರು ವಹಿಸಿಕೊಂಡಾಗ ಇಂತಹ ಶ್ರಮದಾನಗಳು ಸಾರ್ಥಕವಾಗುತ್ತವೆ ಎಂದರು.
ಈ ಸಂದರ್ಭ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಕ್ಯಾ.ಗಣೇಶ್ ಕಾರ್ಣಿಕ್, ಮಾಸಾ ಹಿರೋ, ಪ್ರೊ.ಸತೀಶ್ ಭಟ್, ನವೀನ್ ದೇವಾಡಿಗ ಬರ್ಕೆ, ಜಾನ್ ಕೆನಡಿ, ಶೋಭಾ ಶೆಟ್ಟಿ, ಲತಾಮಣಿ ರೈ, ಮಹೇಶ್ ಕುಮಾರ್, ರಂಜಿತಾ ಗಣೇಶ್ ಕುದ್ರೋಳಿ, ಜಗನ್ ಕೋಡಿಕಲ್, ಸರಿತಾ ಶೆಟ್ಟಿ, ಸೌರಜ್ ಮಂಗಳೂರು ಇನ್ನಿತರ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಕಸ-ಕಡ್ಡಿ ಮಣ್ಣುಕಲ್ಲು ತೆರವು: ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಸ್ವಯಂಸೇವಕರು ಬೊಕ್ಕಪಟ್ಣ ಮಣ್ಣಗುಡ್ಡೆ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಮಧುಚಂದ್ರ ಅಡ್ಯಂತಾಯ, ಮೋಹನ್ ಕೊಟ್ಟಾರಿ ಹಾಗೂ ಹಿರಿಯ ಕಾರ್ಯಕರ್ತರು ಮಳೆಗಾಲವನ್ನು ಗಮನದಲ್ಲಿರಿಸಿಕೊಂಡು ತೋಡುಗಳಲ್ಲಿದ್ದ ಕಸ-ಕಡ್ಡಿ ಮಣ್ಣುಕಲ್ಲುಗಳನ್ನು ತೆರವು ಮಾಡಿದರು.
ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಮೀಳಾ ಮುಂದಾಳತ್ವದಲ್ಲಿ ರಸ್ತೆಗಳನ್ನು ಗುಡಿಸಿ, ಶುಚಿಗೊಳಿಸಿ ಕಸವನ್ನು ಲಾರಿಗೆ ತುಂಬಿಸಿದರು. ಅಲ್ಲಲ್ಲಿದ್ದ ತ್ಯಾಜ್ಯರಾಶಿಗಳನ್ನು ತೆರವು ಮಾಡಲಾಯಿತು. ಶ್ರೀದೇವಿ ಆರ್ಟ್ಸ್ ಕರ್ಣ ಸಹಕಾರದೊಂದಿಗೆ ಬರ್ಕೆ ಕ್ರಾಸ್ ರಸ್ತೆ ಹಾಗೂ ಬೊಕ್ಕಪಟ್ಣ ಎಂಬ ಎರಡು ಮಾರ್ಗಸೂಚಕ ಫಲಕಗಳನ್ನು ಹಳದಿ ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಿಸಲಾಯಿತು.
7 ತ್ಯಾಜ್ಯ ಬೀಳುವ ಸ್ಥಳಗಳ ಸ್ವಚ್ಛತೆ:ಬೊಕ್ಕಪಟ್ಣ ಮಣ್ಣಗುಡ್ಡ ರಸ್ತೆಯ ಸುಮಾರು ಸ್ಥಳಗಳಲ್ಲಿ ಕೆಲವರು ತ್ಯಾಜ್ಯವನ್ನು ಬಿಸಾಡುತ್ತಿದ್ದರು. ಪರಿಣಾಮ ಅಲ್ಲಿನ ಜನರು ಮೂಗುಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಸ ಹಾಕುವುದನ್ನು ತಡೆಯಲು ಸ್ಥಳೀಯರು ಹಲವು ರೀತಿಯಲ್ಲಿ ಪ್ರಯತ್ನಿಸಿದಾಗ್ಯೂ ಅನಾಮಿಕರು ತ್ಯಾಜ್ಯ ಸುರಿಯುವುದನ್ನು ಮುಂದುವರೆಸಿದ್ದರು. ಇದನ್ನರಿತ ರಾಮಕೃಷ್ಣ ಮಿಷನ್ ಕಾರ್ಯಕರ್ತರು ಸಮಸ್ಯೆಯನ್ನು ನಿವಾರಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು.
ಮೊದಲು ತ್ಯಾಜ್ಯ ಬಿಸಾಡುತ್ತಿದ್ದ ಸುಮಾರು ಏಳು ಸ್ಥಳಗಳನ್ನು ಗುರುತಿಸಿದರು. ಬಳಿಕ ದಿಲ್‌ರಾಜ್ ಆಳ್ವ, ಸತೀಶ್ ಕೆಂಕನಾಜೆ, ಮೆಹಬೂಬ್ ಖಾನ್, ಅನಿರುದ್ಧ ನಾಯಕ್, ಯೋಗೀಶ್ ಕಾಯರ್ತಡ್ಕ, ಧನುಷ್ ಶೆಟ್ಟಿ, ಪ್ರಕಾಶ್ ಎಸ್.ಎನ್. ನೇತೃತ್ವದಲ್ಲಿ ಆ ಸ್ಥಳಗಳಲ್ಲಿದ್ದ ವಾಸನೆಯುಕ್ತ ರಾಶಿ ರಾಶಿ ತ್ಯಾಜ್ಯವನ್ನು ತೆಗೆದು ಲಾರಿಗೆ ತುಂಬಿಸಿ ಸ್ವಚ್ಛಗೊಳಿಸಲಾಯಿತು. ಅಗತ್ಯವಿದ್ದಲ್ಲಿ ಜೆಸಿಬಿ ಕೂಡ ಬಳಸಿಕೊಳ್ಳಲಾಯಿತು.
ಯೋಧರ ಪಡೆ ಕಣ್ಗಾವಲು: ಸ್ವಚ್ಛಗೊಳಿಸಿದ ಬಳಿಕ ಆ ಜಾಗದಲ್ಲಿ ಮಣು,್ಣ ಜಲ್ಲಿ ಹಾಕಿ ಸಮತಟ್ಟುಗೊಳಿಸಲಾಯಿತು. ಅಲ್ಲಿ ಆಲಂಕಾರಿಕ ಗಿಡಗಳುಳ್ಳ ಕುಂಡಗಳನಿಟ್ಟು ಸ್ಥಳವನ್ನು ಅಂದಗೊಳಿಸಲು ಪ್ರಯತ್ನಿಸಲಾಗಿದೆ. ಇಂದಿನಿಂದ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾಮಿಕರು ಕಸ ಹಾಕದಂತೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರ ಪಡೆ ಕಣ್ಗಾವಲು ಕಾಯಲಿದೆ.
ಸ್ವಚ್ಛತಾ ಜಾಗೃತಿ : ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ವಾಣಿಶ್ರೀ, ನಿರೀಕ್ಷಾ, ಸ್ವಾತಿ ಹಾಗೂ ಇನ್ನಿತರು ಸ್ವಯಂಸೇವಕರು ಬೊಕ್ಕಪಟ್ಣ ರಸ್ತೆಯ ಮುಖ್ಯ ರಸ್ತೆಯ ಅಂಗಡಿ-ಮುಂಗಟ್ಟುಗಳನ್ನು ಸಂಪರ್ಕಿಸಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಸಹಕರಿಸುವಂತೆ ವಿನಂತಿಸಿದರು. ಕಿಶೋರ್ ಕುಮಾರ್, ಅವಿನಾಶ್ ಅಂಚನ್, ನಾಗೇಶ್ ಸರಿಪಳ್ಳ, ಜಿ.ಕೃಷ್ಣ, ಮುಖೇಶ್ ಆಳ್ವ, ಹಿಮ್ಮತ್ ಸಿಂಗ್ ಇನ್ನಿತರ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.







