‘ಜನಪದ ಹಾಡು ಸಂಸ್ಕೃತಿಯ ಅವಿಭಾಜ್ಯ ಅಂಗ’

ಮಂಗಳೂರು, ಜೂ.2: ಜನಪದ ಹಾಡುಗಳು ಪ್ರತಿಯೊಂದು ಸಂಸ್ಕೃತಿಯ ಶ್ರೀಮಂತ ಹಾಗೂ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಮಾತೆಯರ ಪಾತ್ರ ಮಹತ್ವದ್ದು ಎಂದು ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ಹಾಗೂ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುವ ಸಾಂಪ್ರದಾಯಿಕ ಕೊಂಕಣಿ ಹಾಡುಗಳ ಸರ್ಟಿಫಿಕೆಟ್ ಕೋರ್ಸ್‌ನ ಸಮಾರಂಭವು ಶಕ್ತಿನಗರದ ಕಲಾಂಗಣದಲ್ಲಿ ಉದ್ಘಾಟನೆಗೊಂಡಿತು. ಸಮಾರಂಭದಲ್ಲಿ ಮಾತನಾಡಿದ ಎರಿಕ್ ಒಝೇರಿಯೊ, ಸಾಂಪ್ರದಾಯಿಕ ಹಾಡುಗಳಲ್ಲಿ ಜನಾಂಗದ ಕಥೆ-ವ್ಯಥೆ, ಬೆಳವಣಿಗೆ ಅಡಗಿದೆ ಎಂದರು.
ಜನಪದ ಹಾಡುಗಳನ್ನು ಸ್ವರ ಸಂಯೋಜನೆಯೊಡನೆ ಕಲಿತು, ಮುಂದಿನ ಪೀಳಿಗೆಗೆ ಕಲಿಸುವ ಜವಾಬ್ದಾರಿಯಿಂದ ಈ ಕೋರ್ಸ್ ಆಯೋಜಿಸಲಾಗಿದೆ. ಇಲ್ಲಿ ಮಾಂಡೊ, ದುಲ್ಪದಾಂ, ದೆಕ್ಣಿ, ಗುಮಟೆ ಹಾಡುಗಳು, ಮದುವೆ ಸೋಭಾನೆ ಹಾಡುಗಳು, ಕ್ರಿಸ್ಮಸ್ ಹಾಡುಗಳು, ಜೋಗುಳ ಹಾಡುಗಳು ಹಾಗೂ ಹಿರಿಯ ಸಂಗೀತಗಾರರ ಹಾಡುಗಳು ಹೀಗೆ 40 ಹಾಡುಗಳನ್ನು ಕಲಿಸಲಾಗುತ್ತದೆ. ಎಲ್ಲ ತರಗತಿಗಳಿಗೆ ಹಾಜರಾಗಿ ಕಲಿತವರಿಗೆ ಅಕಾಡಮಿಯಿಂದ ಸರ್ಟಿಫಿಕೇಟ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಖ್ಯಾತ ಸಂಗೀತ ತರಬೇತುದಾರ ಅನಿಲ್ ಪತ್ರಾವೊ ಕೊಂಕಣಿಗರ ಅನನ್ಯ ಸಂಗೀತ ಉಪಕರಣ ಗುಮಟ್‌ಗೆ ಮಲ್ಲಿಗೆ ಹಾಗೂ ಅಬ್ಬಲಿಗೆ ಹೂವುಗಳ ಹಾರ ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಹಾಗೂ ಸುಮೇಳ್ ಸಮನ್ವಯಿ ಸುನೀಲ್ ಮೊಂತೆರೊ ಉಪಸ್ಥಿತರಿದ್ದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.







