ಬಸವ ಜಯಂತಿ ರಜೆ ರಹಿತ ಆಚರಿಸಬೇಕು: ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್
ಬೆಂಗಳೂರು, ಜೂ.2: ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ರಜೆ ರಹಿತ ಆಚರಣೆಗೆ ಸರಕಾರ ಮುಂದಾಗಬೇಕು ಎಂದು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ರವಿವಾರ ಕುಮಾರಕೃಪಾದ ಗಾಂಧಿ ಭವನದಲ್ಲಿ ಭೂಸೇನಾ ಕಾರ್ಯಾಗಾರ ಬಸವ ಬಳಗವು ಆಯೋಜಿಸಿದ್ದ, ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರ ವಚನ ಸಾಹಿತ್ಯವನ್ನು ವಿಶ್ವದೆಲ್ಲೆಡೆ ಪ್ರಚುರಪಡಿಸುವ ಅಗತ್ಯವಿದೆ. ಹೀಗಾಗಿ ಬಸವಣ್ಣನವರ ಜಯಂತಿಯನ್ನು ರಜೆ ರಹಿತ ಆಚರಿಸಲು ಸರಕಾರ ತೀರ್ಮಾನಿಸುವುದು ಸೂಕ್ತ ಎಂದರು.
ಕಾಯಕ, ದಾಸೋಹ ಮತ್ತು ಜ್ಞಾನಾರ್ಜನೆಯ ಮೂಲಕ ಸರ್ವಧರ್ಮವನ್ನು ಕಂಡವರು ಬಸವಣ್ಣ. ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ನಿರ್ಮೂಲನೆ ಮಾಡಿ, ಎಲ್ಲ ವರ್ಗದ ಜನರನ್ನು ಮೇಲೆತ್ತಿದ್ದಾರೆ. ವಚನ ಸಾಹಿತ್ಯದ ಮೂಲಕ ಜಗತ್ತಿನ ಸತ್ಯದರ್ಶನ ಮಾಡಿಸಿದ್ದಾರೆ ಎಂದು ನುಡಿದರು.
ಹಿರಿಯ ಸಾಹಿತಿ ಹಿ.ಚಿ. ಶಾಂತವೀರಯ್ಯ ಮಾತನಾಡಿ, ಜಗತ್ತಿನ ಸಾಹಿತ್ಯ ಪ್ರಕಾರಗಳಲ್ಲಿ ವಚನ ಸಾಹಿತ್ಯ ಶ್ರೇಷ್ಠವಾದದು. ದಿನನಿತ್ಯದ ಬದುಕನ್ನು ತಾತ್ವಿಕ ರೂಪದಲ್ಲಿ ವಚನದ ಮೂಲಕ ಜನರ ಕಣ್ಣು ತೆರೆಸಿದ್ದಾರೆ. ಹೀಗಾಗಿ ಬಸವೇಶ್ವರರು ಜಗಜ್ಯೋತಿ ಎನಿಸಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಕನಕಪುರದ ದೇಗುಲಮಠದ ಚನ್ನಬಸವ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಮುದ್ದು ಮೋಹನ್, ಬಸವ ಬಳಗದ ಯೋಗಾನಂದ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.







