ಸೈಕ್ಲಿಂಗ್ ಮೂಲಕ ಪರಿಸರ ಪೂರಕ ಸಂಚಾರದ ಬಗ್ಗೆ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜೂ.2: ವಿಶ್ವ ಬೈಸಿಕಲ್ ದಿನದ ಅಂಗವಾಗಿ ಸೈಕ್ಲಿಂಗ್ ಮೂಲಕ ಪರಿಸರ ಪೂರಕ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರವಿವಾರ ಮಂಗಳೂರು ಬೈಸಿಕಲ್ ಕ್ಲಬ್-ಎಂಬಿಸಿ ಹಾಗೂ ಸೈಕ್ಲಿಂಗ್ ಬಡ್ಡೀಸ್ ಜೊತೆಯಾಗಿ ನಗರದಲ್ಲಿ ನಡೆಸಿತು.
ಎಂಬಿಸಿ 2011ರಲ್ಲಿ ಪ್ರಾರಂಭವಾದಾಗಿನಿಂದ ಕಾರ್ ಫ್ರೀ ಡೇ, ಪರಿಸರ ದಿನ, ವನಮಹೋತ್ಸವದಂತಹ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡು ಗಮನ ಸೆಳೆಯುತ್ತಿವೆ.
ಮುಂಜಾನೆ 6 ಗಂಟೆಗೆ ನಗರದ ಲೇಡಿಹಿಲ್ ಜಂಕ್ಷನ್‌ನಲ್ಲಿ ಸೇರಿದ ಸೈಕ್ಲಿಸ್ಟ್‌ಗಳು ನಗರದೊಳಗೆ ಹಾಗೂ ಕಡಲ ತೀರದಲ್ಲಿ ಸುಮಾರು 25 ಕಿ.ಮೀ ಸವಾರಿ ಮಾಡಿದರು.
ಸುಸ್ಥಿರ, ನಿರ್ಮಲ, ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಮೂಲಕ ಪರಿಸರದಲ್ಲಿ ಮಾಲಿನ್ಯ, ವಾಹನ ದಟ್ಟಣೆ ಕಡಿಮೆ ಮಾಡಬಹುದು ಎನ್ನುವುದನ್ನು ಸಾರುವುದಕ್ಕಾಗಿ ಈ ಸವಾರಿ ಏರ್ಪಡಿಸಲಾಗಿತ್ತು.
ಎಂಬಿಸಿ ಅಧ್ಯಕ್ಷ ದಿಜರಾಜ ನಾಯರ್, ಉಪಾಧ್ಯಕ್ಷ ಶ್ರೀಕಾಂತ ರಾಜ್, ಕಾರ್ಯದರ್ಶಿ ಗಣೇಶ್ ನಾಯಕ್ ಮತ್ತಿತರ ಸದಸ್ಯರು, ಸೈಕ್ಲಿಂಗ್ ಬಡ್ಡೀಸ್ ಸದಸ್ಯರು ಪಾಲ್ಗೊಂಡರು.













